ವಿದ್ಯಾದೇಗುಲ ಶುಭಾರಂಭ, ಆರತಿ ಬೆಳಗಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕವೃಂದ

mng-may31-gandhinagara3
Published on

ಮಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷ ಶುಭಾರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ ಪಕ್ಕಾ ಹಬ್ಬದ ವಾತಾವರಣವೇ ಮನೆ ಮಾಡಿತ್ತು. ಶಾಲೆಗೆ ಹೊಸದಾಗಿ ಬರುವ ವಿದ್ಯಾರ್ಥಿಗಳಿಗೆ ನೀಡುವ ಅದ್ಧೂರಿ ಸ್ವಾಗತವಂತೂ ಮಕ್ಕಳಿಗೆ ಬಹಳ ಖುಷಿ ಹಾಗೂ ಸಂತೋಷವನ್ನು ನೀಡಿದಂತಾಗಿದೆ. ಸುಮಾರು 40 ದಿನಗಳ ಬೇಸಗೆ ರಜೆಯನ್ನು ಅನುಭವಿಸಿ ವಿದ್ಯಾರ್ಥಿಗಳು ಶುಕ್ರವಾರ ಶಾಲೆಗೆ ಆಗಮಿಸಿದ್ದು, ಶಿಕ್ಷಕರು ಆರತಿ ಬೆಳಗಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಬೆಳಗ್ಗೆ 8ರ ಹೊತ್ತಿಗಾಗಲೇ ಶಿಕ್ಷಕರು ಶಾಲೆಗೆ ಬಂದು ರಂಗೋಲಿ ಬಿಡಿಸಿ, ಆವರಣದಲ್ಲಿ ಹೂವಿನ ಶೃಂಗಾರದ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ದೃಶ್ಯಗಳು ಎಲ್ಲೆಡೆ ಕಾಣ ಸಿಗುತ್ತಿತ್ತು. ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಂತೆ ಅವರನ್ನು ಮೆರವಣಿಗೆಯ ಮೂಲಕ ಬ್ಯಾಂಡ್ ವಾದ್ಯಗಳನ್ನು ಬಾರಿಸುತ್ತಾ ಶಾಲೆ ಆವರಣಕ್ಕೆ ಕರೆಸಿಕೊಳ್ಳುತ್ತಿದ್ದಂತೆ ಅವರಿಗೆ ಆರತಿ ಎತ್ತಿಕೊಂಡು ಪುಷ್ಪಾರ್ಚನೆ ಮಾಡಿ ಹರಸಿದರು. ಪುಟಾಣಿ ವಿದ್ಯಾರ್ಥಿಗಳು ಚೀಲದ ತುಂಬಾ ಪುಸ್ತಕಗಳನ್ನು ಹೊತ್ತುಕೊಂಡು ಖುಷಿಯಿಂದ ಶಾಲೆ ಕಡೆಗೆ ಹಜ್ಜೆ ಹಾಕುವ ದೃಶ್ಯಗಳು ಒಂದೆಡೆಯಾದರೆ ಹೊಸದಾಗಿ ಶಾಲೆಗೆ ಸೇರಲು ಬರುವ ವಿದ್ಯಾರ್ಥಿ ಅರ್ಧ ಮನಸ್ಸಿನಿಂದ ಹೆತ್ತವರ ಕೈ ಹಿಡಿದುಕೊಂಡು ಶಾಲೆ ಕಡೆಗೆ ಹೋಗುವ ಸನ್ನಿವೇಶಗಳು ಕರಾವಳಿಯ ಬಹುತೇಕ ಶಾಲೆಗಳಲ್ಲಿ ಕಾಣಿಸಿಕೊಂಡಿದೆ.

*ಬಿಸಿಯೂಟ ಸವಿದ ವಿದ್ಯಾರ್ಥಿಗಳು

ತರಗತಿಗಳಿಗೆ ಬಂದ ವಿದ್ಯಾರ್ಥಿಗಳಿಗೆ ಶಾಲಾ ಆರಂಭೋತ್ಸವದ ಸುಂದರ ಕಾರ‌್ಯಕ್ರಮದಲ್ಲಿ ಗರಿಗರಿಯ ಸಮವಸ ಜತೆಗೆ ಹೊಸದಾಗಿ ಬಂದ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳ ಕೈಗೆ ಕೊಟ್ಟಾಗ ಅವರಲ್ಲಿ ಸಂತೃಪ್ತಿಯ ನಗು ಕಾಣಿಸಿಕೊಂಡಿತು. ಶಾಲಾ ಆರಂಭೋತ್ಸವ ಜತೆಯಲ್ಲಿ ಶೈಕ್ಷಣಿಕ ವರ್ಷದ ವಿಚಾರದಲ್ಲಿ ಸ್ಥಳೀಯ ಎಸ್‌ಡಿಎಂಸಿಯವರು, ಮುಖ್ಯಶಿಕ್ಷಕರು ಹಾಗೂ ಸ್ಥಳೀಯ ಗಣ್ಯರು ವಿಶೇಷ ರೀತಿಯ ಸಂದೇಶ ನೀಡುವ ಮೂಲಕ ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸುವ ಕೆಲಸ ಮಾಡಿದರೆ ಮತ್ತೊಂದೆಡೆ ಕಾರ‌್ಯಕ್ರಮ ಮುಗಿಯುತ್ತಿದ್ದಂತೆ ಬಿಸಿಯೂಟದ ವ್ಯವಸ್ಥೆಯನ್ನು ಶಾಲೆಗಳಲ್ಲಿ ಮಾಡಲಾಗಿತ್ತು.

*ಇಂದು ಪಿಯು ಆರಂಭ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಯುಸಿಯ ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಕೂಡ ಜೂ.1ರಿಂದ ಆರಂಭವಾಗಲಿದೆ. ದ.ಕ.ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ 204 ಕಾಲೇಜುಗಳಿದ್ದು, ಏಕಕಾಲದಲ್ಲಿ ಆರಂಭವಾಗಲಿದೆ.

------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net