

ಅಳವಂಡಿ: ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ನಾಗರೆಡ್ಡಿ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ತಾಪಂ ಮಾಜಿ ಸದಸ್ಯ ವೀರೇಶ ಸಜ್ಜನ್ ಮಾತನಾಡಿ, ಶಿಕ್ಷಕರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದು ಅವರಿಗೆ ಗೌರವ ಸಲ್ಲಿಸುವುದು ಸಮಾಜದ ಕರ್ತವ್ಯ. ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿದರೆ ಅದೇ ಅವರಿಗೆ ಸನ್ಮಾನ ಎಂದರು.
ಶಿಕ್ಷಕ ಗಿರಿಯಪ್ಪ ಹಾರ್ನಹಳ್ಳಿ ಮಾತನಾಡಿ, ಗುರುವನ್ನು ಗೌರವಿಸಿದರೆ ಗುರಿ ಮುಟ್ಟುತ್ತೇವೆ. ನಿಂದಿಸಿದರೆ ಗುಲಾಮರಾಗುತ್ತೇವೆ ಆ ಕಾರಣಕ್ಕಾಗಿ ನಾವುಗಳು ಗುರುವನ್ನು ಗೌರವದಿಂದ ಕಾಣಬೇಕು ಎಂದರು.
ಗ್ರಾಪಂ ಅಧ್ಯಕ್ಷ ದುರಗಪ್ಪ ಭಜಂತ್ರಿ, ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ, ಶಿಕ್ಷಕರಾದ ರಾಜಸಾಹೇಬ ಬಳಿಗಾರ, ಪ್ರಕಾಶರಡ್ಡಿ ಗೋವಿಂದರಡ್ಡಿ, ರವಿಕಿರಣ, ಮರ್ದಾನಲಿ ಗಡಾದ, ಸುನಿತಾ ಯಾಳಗಿ, ಸೋಮಣ್ಣ, ಪರಶುರಾಮ, ಸೋಮಶೇಖರಯ್ಯ, ಪ್ರಮುಖರಾದ ನವೀನ ಮಾದಿನೂರ, ನಾಗರಾಜ ಪಾತ್ರದ, ಶಂಕ್ರಪ್ಪ ಬಡಿಗೇರ, ಮಲ್ಲಪ್ಪ ಚಿಟಚಲಿ ಇತರರಿದ್ದರು.