

ಗದಗ: ಆಧ್ಯಾತ್ಮಿಕತೆ ಸೇರಿದಂತೆ ಲೌಕಿಕ ಜೀವನದಲ್ಲಿ ಭಗವದ್ಗೀತೆ ಪ್ರಾಮುಖ್ಯತೆ ಪಡೆದಿದೆ. ಭಗವದ್ಗೀತೆಯ ಅಧ್ಯಯನ ಅಥವಾ ಪಾರಾಯಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ ಸಂಚಾಲಕ ವಿದ್ವಾನ್ ಗಣಪತಿ ಗಾಂವಕರ್ ಹೇಳಿದರು.
ನಗರದ ವಕೀಲ ಚಾಳದ ಮರಾಠಿ ವಾಙ್ಮಯಪ್ರೇಮಿ ಮಂಡಳದಲ್ಲಿ ತಾಲೂಕು ಬ್ರಾಹ್ಮಣ ಸಂಘ, ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಗೀತೆಯ ಪಠಣ ಮಾಡಬೇಕು. ಈ ಬಾರಿ ಸ್ವರ್ಣವಲ್ಲೀ ಶ್ರೀ ಶಂಕರ ಮಠದಿಂದ ಗೀತೆಯ ಮೂರನೇ ಅಧ್ಯಾಯದ ಪಾರಾಯಣ, ಪ್ರವಚನಗಳು ನಡೆಯುತ್ತಿವೆ. ಇದರಲ್ಲಿ ಮಾನವನ ಕರ್ಮಯೋಗಕ್ಕೆ ಮಹತ್ವ ನೀಡಲಾಗಿದೆ. ಎಲ್ಲರೂ ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವದಿಂದ ತಮ್ಮ ಕಾರ್ಯವನ್ನೇ ದೈವೀ ಪೂಜೆ ಎಂದು ಭಾವಿಸಿ ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಹೇಳಲಾಗಿದೆ ಎಂದರು.
ವೈದಿಕ ವಿದ್ವಾಂಸ ರತ್ನಾಕರಭಟ್ ಜೋಶಿ ಮಾತನಾಡಿ, ಭಗವದ್ಗೀತೆ ಸದ್ಗುಣಗಳ ಗಣಿ. ಇದರ ಪಾರಾಯಣ ಸದ್ಗತಿಗೆ ಸೋಪಾನ. ಸದ್ಗುಣಗಳ ಆಚರಣೆ ಮನುಷ್ಯನನ್ನು ದೈವಿ ಗುಣಗಳನ್ನು ಹೊಂದುವಂತೆ ಮಾಡಿ ಮೋಕ್ಷಕ್ಕೆ ಸಾಧನವಾಗುತ್ತದೆ. ಸದ್ಗುಣಗಳ ಆಚರಣೆಯೇ ಭಗವದ್ಗೀತೆಯ ಸಂದೇಶವಾಗಿದೆ ಎಂದು ಹೇಳಿದರು.
ಗದಗ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಭಗವದ್ಗೀತೆಯನ್ನು ಸರ್ವರೂ ಪಠಣ, ಪಾರಾಯಣ ಮಾಡಬೇಕು. ಶ್ರೀಕೃಷ್ಣ ಪರಮಾತ್ಮನು ಬೋಧಿಸಿದ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದರು.
ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮುಂಡರಗಿಯ ಶ್ರೇಯಾ ಜೋಶಿ ಅವರನ್ನು ಸನ್ಮಾನಿಸಲಾಯಿತು.
ಗಿರೀಶ ಕುಲಕರ್ಣಿ, ಪಿ.ಆರ್. ಇನಾಮದಾರ, ಎ.ಡಿ. ಗೋಡಖಿಂಡಿ, ರಾಜಗೋಪಾಲಾಚಾರ್ ಮಳಗಿ, ದೇವೇಂದ್ರ ಪಾಟೀಲ, ಕೃಷ್ಣಾ ಕುಲಕರ್ಣಿ, ಕೃಷ್ಣಮೂರ್ತಿ ಪಾಟೀಲ, ಹೇಮಂತ ಕುಲಕರ್ಣಿ, ಅನಿಲ ತೆಂಬದಮನಿ, ಆನಂದ ಕುಲಕರ್ಣಿ, ವಿನಾಯಕ ಕುಲಕರ್ಣಿ, ಡಾ. ಆರ್.ಆರ್. ಜೋಶಿ, ತಾಲೂಕು ಬ್ರಾಹ್ಮಣ ಸಂಘ, ಅದ್ವೈತ ಪ್ರಸಾರ ಪರಿಷತ್ತು, ಬ್ರಾಹ್ಮಣ ಹಿತರಕ್ಷಣಾ ಸಮಿತಿ, ಶಂಕರಮಠ ಸೇವಾ ಸಮಿತಿ, ಬ್ರಾಹ್ಮಣ ಸಮಾಜ ಬಾಂಧವರು, ವಿವಿಧ ವಿಪ್ರ ಮಹಿಳಾ ಭಜನಾ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು.
ಶ್ರುತಿ ಜೋಶಿ ಗೀತಾ ಶ್ಲೋಕ ಪಠಿಸಿದರು. ದತ್ತಾತ್ರೇಯ ಜೋಶಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಪ್ರಶಾಂತ ಪಾಟೀಲ ವಂದಿಸಿದರು.