

ಧಾರವಾಡ: ಭಾರತದಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಎ್ಎಲ್‌ಎನ್) ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಲಿದೆ. ಇದನ್ನು ಗುಣಾತ್ಮಕ ಮೌಲ್ಯಮಾಪನದಿಂದ ಮಾತ್ರ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು.
ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಭಾರತದಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಉಪಕ್ರಮಗಳ ಅಧ್ಯಯನ’ದ ಪರಾಮರ್ಶಾ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ಶಿಕ್ಷಕರು ಚಟುವಟಿಕೆಯಾಧಾರಿತ ಬೋಧನಾ ಕ್ರಮಗಳನ್ನು ರೂಢಿಸಿಕೊಂಡು ಮಕ್ಕಳು ಸ್ಪಷ್ಟ ಓದು, ಶುದ್ಧ ಬರಹ ಮತ್ತು ಸರಳ ಗಣಿತ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಧಿಕಾರಿಗಳು ಇದನ್ನು ಮೇಲ್ವಿಚಾರಣೆ ಮಾಡುವುದನ್ನು ಆದ್ಯತೆ ವಿಷಯವಾಗಿ ಪರಿಗಣಿಸಿ, ಶಿಕ್ಷಕರಿಗೆ ರಚನಾತ್ಮಕ ಮಾರ್ಗದರ್ಶನ ಮಾಡಬೇಕು ಎಂದರು.
ನವದೆಹಲಿಯ ಎನ್‌ಸಿಇಆರ್‌ಟಿಯ ಮೂಲ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ಸುನಿತಿ ಸನ್ವಾಲ್ ಮಾತನಾಡಿ, ಭಾರತದಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಉಪಕ್ರಮಗಳನ್ನು ಐದು ಹಂತದಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂದರು. ಎ್ಎಲ್‌ಎನ್ ಮಿಷನ್ ಅಡಿಯಲ್ಲಿ ತಯಾರಿಸಿದ ಎಲ್‌ಟಿಎಂಗಳನ್ನು ಅಧ್ಯಯನ ಮಾಡುವುದು. ತರಗತಿಯ ಬೋಧನಾ ವಿಧಾನಗಳು ಮತ್ತು ಪಠ್ಯ ಸಾಮಗ್ರಿಗಳ ಬದಲಾವಣೆ ದಾಖಲಿಸುವುದು. ಶಿಕ್ಷಕರ ತರಬೇತಿ ಹಾಗೂ ನಿರಂತರ ವೃತ್ತಿಪರ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ಅಧ್ಯಯನ ಮಾಡಬೇಕಾಗಿದೆ ಎಂದರು.
ಪೋಷಕರು ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಮೌಲ್ಯಮಾಪನ ಮಾಡುವುದು ಪ್ರಮುಖವಾಗಿದೆ. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಎ್ಎಲ್‌ಎನ್) ಮಿಷನ್‌ನ ಅನುಷ್ಠಾನದಲ್ಲಿ ಇರುವ ಲೋಪ ದೋಷಗಳನ್ನು ಗುರುತಿಸುವುದರಿಂದ, ಇದನ್ನು ಸುಧಾರಿಸಬಹುದು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕಿ (ಅಭಿವೃದ್ಧಿ) ಪ್ರಮಿತಾ ಅದೋನಿ, ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಗಿರೀಶ್ ಪದಕಿ, ರಾಜ್ಯದ ವಿವಿಧ ಜಿಲ್ಲೆಗಳ ಡಯಟ್ ಪ್ರಾಚಾರ್ಯರು, ಉಪನ್ಯಾಸಕರು, ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಾಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಶೈಲಾ ನಾಯಕ ಪ್ರಾರ್ಥಿಸಿದರು. ಡಯಟ್ ಪ್ರಾಚಾರ್ಯೆ ಜಯಶ್ರೀ ಕಾರೇಕರ ಸ್ವಾಗತಿಸಿದರು. ಕುಮಾರ ಹುಲಗೂರ ನಿರೂಪಿಸಿದರು. ಡಾ.ಪೂಜಾ ಪಾಟೀಲ ವಂದಿಸಿದರು.