

ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಬೆಂಬಲಿತ 110 ಅಭ್ಯರ್ಥಿಗಳು ಜಯ ಗಳಿಸಿದ್ದು ಕೂದಲೆಳೆ ಅಂತರದಲ್ಲಿ ಹಲವರು ಪರಾಜಿತರಾಗಿದ್ದಾರೆ. ಈ ಫಲಿತಾಂಶ ಪಕ್ಷಕ್ಕೆ ಕ್ಷೇತ್ರದಲ್ಲಿ ಗಟ್ಟಿ ನೆಲೆ ಒದಗಿಸಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸೇರಿ ಈ ಮೊದಲಿನ ಚುನಾವಣೆಗಳಲ್ಲಿ ಜೆಡಿಎಸ್ಗೆ ಗಟ್ಟಿ ತಳಹದಿಯೇ ಇರಲಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಹಣ ಬಲದ ನಡುವೆಯೂ ಕಾಂಗ್ರೆಸ್ ಹಾಗೂ ಸಮಾನ ಮನಸ್ಕರೊಂದಿಗೆ ಸೇರಿ ಚುನಾವಣೆ ಎದುರಿಸಿದ ಪರಿಣಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗರಿಗಿಂತಲೂ ಅಧಿಕ ಸ್ಥಾನ ಗಳಿಸಲು ಸಾಧ್ಯವಾಗಿದೆ. ಬಹಳ ಮುಖ್ಯವಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಪಕ್ಷಕ್ಕೆ ಪ್ರತಿನಿಧಿಗಳು ದೊರೆತಿದ್ದು ಮುಂಬರುವ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಆತ್ಮವಿಶ್ವಾಸ ಮೂಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ,ಕಾಂಗ್ರೆಸ್ನ ಪ್ರಬಲ ಪ್ರತಿರೋಧವನ್ನು ಎದುರಿಸಿ ತ್ರಿಕೋನ ಸರ್ಧೆಯಲ್ಲೂ ಜಯ ಗಳಿಸಿರುವುದು ಮತ್ತು ನಿರೀಕ್ಷೆ ಮಾಡದಿರುವ ಕಡೆಗಳಲ್ಲಿ ಜೆಡಿಎಸ್ ಬೆಂಬಲಿಗರು ಜಯ ಗಳಿಸಿರುವುದು ಆತ್ಮವಿಶ್ವಾಸ ಮೂಡಿಸಿದೆ. ಕೆಲವು ಕ್ಷೇತ್ರಗಳಲ್ಲಿ ನಮ್ಮವರನ್ನು ಸೋಲಿಸುವ ಉದ್ದೇಶದಿಂದಲೇ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ಬೇಸರದ ಸಂಗತಿ ಎಂದರು.
ಜಾತಿ, ಧರ್ಮದ ಆಧಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ನಿಯಂತ್ರಿಸಲು ರಾಜ್ಯ ರಾಜಕಾರಣದಲ್ಲಿ ಧ್ರುವೀಕರಣದ ಅಗತ್ಯವಿದೆ. ಗ್ರಾಪಂ ಚುನಾವಣೆಗೆ ಮುನ್ನ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ತಾಲೂಕಿನಲ್ಲಿ ನಡೆಸಿದ ಪಾದಯಾತ್ರೆ ಚುನಾವಣಾ ಫಲಿತಾಶದ ಮೇಲೆ ಪರಿಣಾಮ ಬೀರಿದೆ. ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ಜನರ ಕಣ್ಣೊರೆಸುವ ತಂತ್ರಗಾರಿಕೆ ನಡೆಸಿದೆ ಎಂದು ಟೀಕಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಎಲ್.ಸುಂದರೇಶ್, ಶಿಮುಲ್ ಅಧ್ಯಕ್ಷ ಆನಂದ ಗೌಡ, ಕೊಲ್ಲೂರಯ್ಯ, ಜೀನಾ ವಿಕ್ಟರ್, ಹೊರಬೈಲು ರಾಮಕೃಷ್ಣ, ಉಮೇಶ್ ಹಾಲುಗದ್ದೆ, ಕಟ್ಟೆಹಕ್ಕಲು ಕಿರಣ್ ಹಾಗೂ ಶಚ್ಚಿಂದ್ರ ಹೆಗ್ಡೆ ಇತರರಿದ್ದರು.
ಒತ್ತುವರಿಯಾಗಿದ್ದರೂ ನೆಟ್ಟು ಬೆಳೆಸಿದ ಅಡಕೆ ಗಿಡ ಕಡಿಯುವುದು ಅಮಾನವೀಯ. ಅರಣ್ಯ ಇಲಾಖೆಯವರು ಮನೆ ಬೇಲಿ ಕೀಳುವುದನ್ನು ಜೆಡಿಎಸ್ ವಿರೋಧಿಸುತ್ತದೆ. ಅಧಿಕಾರಿಗಳು ಪಕ್ಷಪಾತ ಧೋರಣೆ ಕೈಬಿಡಬೇಕು ಮತ್ತು ಈಗಿನ ಪ್ರವೃತ್ತಿ ಮುಂದುವರಿದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ವೈಯಕ್ತಿಕವಾಗಿ ದ್ವೇಷಿಸುವ ಮತ್ತು ನನ್ನ ವಿರá-ದ್ಧ ಹಗುರವಾಗಿ ಮಾತನಾಡುವವರು ಬಗ್ಗೆ ನೋ ಕಾಮೆಂಟ್ಸ್.
| ಆರ್.ಎಂ.ಮಂಜುನಾಥ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ