

ಮೈಸೂರು: 15ನೇ ವರ್ಷದ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಹರಿ ವಿದ್ಯಾಲಯ ವತಿಯಿಂದ ಭಾನುವಾರ ಆಯೋಜಿಸಿದ್ದ ‘ವಿದ್ಯಾರ್ಥಿ ರನ್’ ರಸ್ತೆ ಓಟ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಬೋಗಾದಿಯ ಹರಿ ವಿದ್ಯಾಲಯ ಆವರಣದಲ್ಲಿ ವಿವಿಧ ವಯೋಮಾನದವರಿಗೆ ಆಯೋಜಿಸಿದ್ದ ಓಟ ಸ್ಪರ್ಧೆಯಲ್ಲಿ ನೂರಾರು ಜನರು ಓಡಿ ಸಂಭ್ರಮಿಸಿದರು. 16 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ 3 ಕಿ.ಮೀ.ಓಟ ಸ್ಪರ್ಧೆ, 19 ವರ್ಷದೊಳಗಿನ ಬಾಲಕರು, ಪುರುಷರು ಹಾಗೂ ಮಹಿಳೆಯರಿಗೆ 5 ಕಿ.ಮೀ.ಓಟದ ಸ್ಪರ್ಧೆ ಆಯೋಜನೆಗೊಂಡಿತ್ತು.
16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆರ್.ಕಿಶನ್(ಪ್ರಥಮ), ಕೆ.ಆರ್.ಕವಿರಾಜ್(ದ್ವಿತೀಯ), ಬಿ.ಅಮೋಘ್(ತೃತೀಯ) ಬಹುಮಾನ ಪಡೆದರು. 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹನ್ಸಿಕಾ(ಪ್ರ), ಸಂಜನಾ ನಾಗೇಶ್ (ದ್ವಿ), ವೈಷ್ಣವಿ(ತೃ) ಬಹುಮಾನ ಪಡೆದರು. 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಾಹುಲ್(ಪ್ರ), ವೇದ ವರುಣ್(ದ್ವಿ), ಯುವರಾಜ್(ತೃ) ಬಹುಮಾನ ಪಡೆದರು.
19 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಮಣಿಕಂಠ(ಪ್ರ), ಪುರುಷೋತ್ತಮ (ದ್ವಿ), ಡಿ.ಸೋಹಿತ್ ಶಿವರಾಜ್(ತೃ) ಹಾಗೂ ಮಹಿಳಾ ವಿಭಾಗದಲ್ಲಿ ಚೈತ್ರಾ(ಪ್ರ), ಆರ್.ನಮ್ರತಾ(ದ್ವಿ), ಜಿ.ದಿಶಾ(ತೃ) ಬಹುಮಾನ ಪಡೆದರು.
ಬಹುಮಾನ ವಿತರಣೆ: ಅಂತಾರಾಷ್ಟ್ರೀಯ ಅಥ್ಲೀಟ್ ಎಸ್.ಸೋಮಶೇಖರ್ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳ ಜೀವನದ ಬಹುಮುಖ್ಯ ಅಂಶ. ನಾನು ಕ್ರೀಡೆಯಿಂದಲೇ ಬದುಕು ಕಟ್ಟಿಕೊಂಡಿದ್ದೇನೆ. ಮಕ್ಕಳು ಓದಿನ ಜತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಂಡರೆ ಆರೋಗ್ಯ, ದೈಹಿಕ ಸದೃಢತೆ ಕಾಪಾಡಿಕೊಳ್ಳಬಹುದು ಎಂದರು.
ಪಾಲಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸಬೇಕು. ಕೆಲವರು ಅದರಿಂದಲೇ ಬದುಕು ರೂಪಿಸಿಕೊಳ್ಳುತ್ತಾರೆ, ಸಾಧನೆ ಮಾಡುತ್ತಾರೆ. ಅದರಲ್ಲಿ ದೈಹಿಕ ಶಿಕ್ಷಕರು ಹಾಗೂ ಪೋಷಕರ ಪಾತ್ರ ಬಹಳ ಮುಖ್ಯ ಎಂದರು.
ಉದ್ಯಮಿ ಬಿ.ಎಸ್.ಪ್ರಶಾಂತ್, ಹರಿ ವಿದ್ಯಾಲಯದ ಅಧ್ಯಕ್ಷ ಶ್ರೀನಿವಾಸ ಹೊಸಮನೆ ಮಾತನಾಡಿದರು. ಸದಸ್ಯ ಎಚ್.ಆರ್.ಭಗವಾನ್, ನಿರ್ದೇಶಕ ಕೆ.ವಿ.ಸತ್ಯನ್, ಪ್ರಾಂಶುಪಾಲರಾದ ಡಾ.ಎಸ್.ಭಾರತಿ ಶಂಕರ್ ಇದ್ದರು. ಸುಮಾರು 20 ಶಾಲೆಗಳ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.