

ಶಿರಸಿ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಕರೆಕೊಟ್ಟಿರುವ ಮುಷ್ಕರಕ್ಕೆ ಶಿರಸಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತಗೊಂಡಿತು. ಇಲ್ಲಿಯ ತಾಲೂಕು ಆಡಳಿತ ಸೌಧದ ಎದುರು ಶಿರಸಿ ಸಂಘದಿಂದಲೂ ಮುಷ್ಕರಕ್ಕೆ ಬೆಂಬಲ ನೀಡಿ, ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೊಬೈಲ್ ಆಪ್ಗಳ ಮೂಲಕ ಒತ್ತಡ ಹೇರುತ್ತಿರುವ ಬಗ್ಗೆ, ಮೂಲ ಸೌಲಭ್ಯ, ಹಲವು ಸೇವಾ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಪ್ಪು ಬಟ್ಟೆ ಧರಿಸಿ ಗ್ರಾಮ ಆಡಳಿತಾಧಿಕಾರಿಗಳು ಸೇವೆ ಬದಿಗಿರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಅಧ್ಯಕ್ಷ ವಿಜಯ್ ಮಾತನಾಡಿ, ಗ್ರಾಮ ಆಡಳಿತ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶಿಸಬೇಕು. ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ನಮ್ಮ ಮುಷ್ಕರಕ್ಕೆ ಕರ್ನಾಟಕ ರಾಜ್ಯ ನೌಕರರ ಸಂಘದಿಂದಲೂ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಉಪ ತಹಸೀಲ್ದಾರ್ ಡಿ.ಆರ್. ಬೆಳ್ಳಿಮನೆ, ಅಣ್ಣಪ್ಪ ಮಡಿವಾಳ, ಚಿದಾನಂದ, ಗ್ರಾಮ ಆಡಳಿತ ಅಧಿಕಾರಿಗಳು ಮತ್ತಿತರರು ಮುಷ್ಕರದಲ್ಲಿ ಭಾಗವಹಿಸಿದ್ದರು.