

ಮಂಗಳೂರು: ಪಾಯಸ, ದೋಸೆ, ಸೋಂಟೆ, ಬೋಂಡ, ಹಲ್ವ, ಕಟ್ಲೇಟ್, ಅಪ್ಪ, ಕೊಟ್ಟಿಗೆ, ಹೋಳಿಗೆ, ಐಸ್‌ಕ್ರೀಮ್ ಹೀಗೆ ಹಲಸಿನ ಹಣ್ಣಿನ ಬಗೆ ಬಗೆಯ ಖಾದ್ಯಗಳು ನಾಲಿಗೆ ಚಪ್ಪರಿಸುವಂತೆ ಮಾಡಿದವು.
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವತಿಯಿಂದ ಭಾನುವಾರ ನಡೆದ ಹಲಸು ಮೇಳ, ಆಹಾರೋತ್ಸವದಲ್ಲಿ ನಿರಂತರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ನೂರಾರು ಮಂದಿ ಆಗಮಿಸಿ ಆಹಾರೋತ್ಸವದಲ್ಲಿ ಪಾಲ್ಗೊಂಡರು.
ಕೃಷಿಕರು ಬೆಳೆಸುವ, ಬಳಸುವ ಆಹಾರ ವಸ್ತುಗಳನ್ನು ನಗರದ ಜನತೆಗೆ ತಲುಪಿಸುವ ಉದ್ದೇಶದಿಂದ ಹಲಸು ಮೇಳ-ಆಹಾರೋತ್ಸವ ಆಯೋಜಿಸಲಾಗಿತ್ತು. ಕೃಷಿಕರು ಬೆಳೆದ ತರಕಾರಿ ಮತ್ತು ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.
ಹಲಸು ಮೇಳವನ್ನು ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ಬಿ.ಎಸ್. ರಾಜಾ ಉದ್ಘಾಟಿಸಿದರು. ದ.ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಎನ್.ಸುವರ್ಣ ಹಲಸಿನ ವಿವಿಧ ತಿಂಡಿಗಳ ಕೌಂಟರ್ ಉದ್ಘಾಟಿಸಿದರು. ಗೋರಿಗುಡ್ಡ ಕಿಟ್ಟೆಲ್ ಮೆಮೋರಿಯಲ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ವಿಠಲ ಎ. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಹವ್ಯಕ ಮಹಾಮಂಡಲದ ಪ್ರ.ಕಾರ್ಯದರ್ಶಿ ಉದಯಶಂಕರ್, ಪ್ರಾಂತ ಉಪಾಧ್ಯಕ್ಷ ಬಾಲ ಸುಬ್ರಹ್ಮಣ್ಯ ಸರ್ಪಮಲೆ ಮುಖ್ಯ ಅತಿಥಿಗಳಾಗಿದ್ದರು.