

ವಿರಾಜಪೇಟೆ: ದೇಶದ ಅಪ್ರತಿಮ ವೀರಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಿ ವಕೀಲ ವಿದ್ಯಾಧರ್ ಗಡಿಪಾರಿಗೆ ಆಗ್ರಹಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟದ ವತಿಯಿಂದ ಗುರುವಾರ ಕರೆ ನೀಡಿದ್ದ ಕೊಡಗು ಬಂದ್‌ಗೆ ಕಡಂಗದಲ್ಲಿ ಉತ್ತಮ ಸ್ಪಂದನೆ ದೊರೆಯಿತು.
ಮಧ್ಯಾಹ್ನ 12 ಗಂಟೆಯವರೆಗೆ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬೆಂಬಲ ವ್ಯಕ್ತಪಡಿಸಿದರು. ಆಟೋ ಚಾಲಕರೂ ಸಾಥ್ ನೀಡಿದರು. ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಜನರ ಸಂಚಾರ ವಿರಳವಾಗಿತ್ತು. ಹಾಲು, ಪತ್ರಿಕೆ, ಮೆಡಿಕಲ್, ಸರ್ಕಾರಿ ಶಾಲೆ, ಸರ್ಕಾರಿ ಕಚೇರಿ, ಆರೋಗ್ಯ ಸೇವೆಗಳು ಎಂದಿನಂತೆ ಲಭ್ಯವಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ವಿರಾಜಪೇಟೆ ಠಾಣೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.