

ಹುಬ್ಬಳ್ಳಿ : ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಅವುಗಳನ್ನು ಪರಿಹರಿಸುವ ಉದ್ದೇಶಕ್ಕಾಗಿ ಮಹಾಪೌರ ರಾಮಪ್ಪ ಬಡಿಗೇರ ಪ್ರಾರಂಭಿಸಿದ್ದ ಮೇಯರ್ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂಧನೆ ವ್ಯಕ್ತವಾಗಿದ್ದು, ಇದುವರೆಗೆ ನಡೆದ 4 ಫೋನ್ ಇನ್ ಕಾರ್ಯಕ್ರಮದಿಂದಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7.92 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಮಹಾಪೌರರ ಕಚೇರಿಯಲ್ಲಿ ಬುಧವಾರ ನಡೆದ ಮೇಯರ್ ಫೋನ್ ಇನ್ನ 5ನೇ ಕಾರ್ಯಕ್ರಮದ ನಂತರ ಮಹಾಪೌರ ರಾಮಪ್ಪ ಬಡಿಗೇರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.
15ನೇ ಹಣಕಾಸು ಯೋಜನೆಯ ಉಳಿತಾಯದ ಅಡಿ ರಸ್ತೆ, ಚರಂಡಿ ಸೇರಿದಂತೆ ಅವಳಿ ನಗರದ ನಾಗರಿಕರು ಫೋನ್ ಮೂಲಕ ನೀಡಿದ ವಿವಿಧ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು.
ಮಹಾಪೌರ ಅಧಿಕಾರ ಅವಧಿ ಪೂರ್ಣಗೊಳ್ಳುತ್ತ ಬಂದಿದೆ. ಹೀಗಾಗಿ, ನನ್ನ ಕೊನೆಯ ಫೋನ್ ಇನ್ ಕಾರ್ಯಕ್ರಮ ಇದು. ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಹಾಗಾಗಿ, ಮುಂದಿನ ಮಹಾಪೌರರಿಗೂ ಫೋನ್ ಇನ್ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುವಂತೆ ಮನವಿ ಮಾಡುವುದಾಗಿ ಹೇಳಿದರು.
ಇದುವರೆಗಿನ 4 ಫೋನ್ ಇನ್ ಕಾರ್ಯಕ್ರಮದಲ್ಲಿ 203 ದೂರುಗಳು ಬಂದಿದ್ದವು. ಇದರಲ್ಲಿ ಸಿ ವಿಭಾಗದ 70 ದೂರುಗಳು ಪರಿಹರಿಸದೇ ಉಳಿದಿದ್ದವು. ಅದರಲ್ಲಿ 35 ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸಿ, ಟೆಂಡರ್ ಕರೆಯಲಾಗಿದೆ. 5ನೇ ಫೋನ್ ಇನ್ ಕಾರ್ಯಕ್ರಮಕ್ಕೆ 21 ಕರೆಗಳು ಬಂದಿವೆ ಎಂದು ತಿಳಿಸಿದರು.
ಅಮ್ಮಿನಬಾವಿಯಿಂದ ಹುಬ್ಬಳ್ಳಿ ಕಡೆಗಿನ ಪೈಪ್ಲೈನ್ ಕಾಮಗಾರಿಗೆ ಇದ್ದಿದ್ದ ಸಮಸ್ಯೆ ಪೂರ್ಣಗೊಳ್ಳುವ ಹಂತದಲ್ಲಿ ಇದೆ. ಆಗಷ್ಟ್ ನಂತರ ಎಲ್ಲ ವಾರ್ಡ್ಗಳಿಗೆ ಪ್ರತಿ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುವುದು ಎಂದರು.
ಹಳೇ ಹುಬ್ಬಳ್ಳಿಯಲ್ಲಿ ಪಾಲಿಕೆ ವತಿಯಿಂದ ನಿರ್ವಿುಸುತ್ತಿರುವ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಲು ಯಾವುದೇ ಸಮಸ್ಯೆ ಇಲ್ಲ. ಪಾಲಿಕೆ ಒಡೆತನದ ಚಿಟಗುಪ್ಪಿ ಆಸ್ಪತ್ರೆ ನಿರ್ವಹಿಸುವುದೇ ಕಷ್ಟವಾಗಿದೆ. ಹೀಗಾಗಿ, ಹಳೇ ಹುಬ್ಬಳ್ಳಿ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಲು ಸಿದ್ಧ ಎಂದು ಹೇಳಿದರು.
ಆದರೆ, ಆಸ್ಪತ್ರೆ ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ. ಆಸ್ಪತ್ರೆ ಕಟ್ಟಡವನ್ನು ಸರ್ಕಾರಕ್ಕೆ ಹಸ್ತಾಂತರಿಸಿದರೆ ಬಾಕಿ ಉಳಿದಿರುವ ಕಟ್ಟಡ ಕಾಮಗಾರಿಯನ್ನು ಯಾರು ಪೂರ್ಣಗೊಳಿಸುತ್ತಾರೆ ? ಸರ್ಕಾರಕ್ಕೆ ಹಸ್ತಾಂತರಿಸಿದ ನಂತರ ಪಾಲಿಕೆ ಅಧಿಕಾರ ಏನಾದರೂ ಇರುತ್ತದೆಯೋ ಅಥವಾ ಇಲ್ಲವೋ ? ಎಂಬ ಹಲವಾರು ಸಂಗತಿಗಳನ್ನು ಕೂಲಂಕುಷವಾಗಿ ರ್ಚಚಿಸಬೇಕಿದೆ. ಇದಕ್ಕಾಗಿ ಮೇ 9 ರಂದು ಪ್ರತಿಪಕ್ಷ ನಾಯಕರು, ಎಲ್ಲ ಪಕ್ಷಗಳ ಹಿರಿಯ ಸದಸ್ಯರು ಹಾಗೂ ಆಯುಕ್ತರೊಂದಿಗೆ ಆಸ್ಪತ್ರೆ ಕಟ್ಟಡಕ್ಕೆ ಭೇಟಿ ನೀಡಿ, ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಹಳೇ ಹುಬ್ಬಳ್ಳಿ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರಿಸುವ ವಿಷಯದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡುತ್ತಿಲ್ಲ. ಶಾಸಕ ಪ್ರಸಾದ ಅಬ್ಬಯ್ಯ ಅವರು ಸಹ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ ಎಂದರು.
ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರಬೇಕಿರುವ ಬಾಕಿ ಅನುದಾನವನ್ನು ತರುವುದಕ್ಕಾಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಸಾಕಷ್ಟು ಪ್ರಯತ್ನ ಪಟ್ಟೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರನ್ನು ಸಹ ಈ ವಿಷಯದ ಕುರಿತು ಭೇಟಿಯಾಗಿ ರ್ಚಚಿಸಿದೆ. ಆದರೆ, ಅವರು ಸಹಕಾರ ನೀಡಲಿಲ್ಲ ಎಂದು ದೂರಿದರು.
ಅಭಿವೃದ್ಧಿ ಕಾಣದ ಬಡಾವಣೆಗಳು ಮಹಾನಗರ ಪಾಲಿಕೆಗೆ ಹಸ್ತಾಂತರ ಆಗಿವಿಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸುವುದಕ್ಕಾಗಿ ನಗರ ಯೋಜನೆ ಉಪ ನಿರ್ದೇಶಕರ ನೇತೃತ್ವದಲ್ಲಿ ತಂಡ ರಚಿಸುವುದಾಗಿ ಮಹಾಪೌರ ರಾಮಪ್ಪ ಬಡಿಗೇರ ತಿಳಿಸಿದರು.