

ಲಕ್ಷ್ಮೇಶ್ವರ: ಬರಪೀಡಿತ ತಾಲೂಕು ಘೋಷಣೆ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ರೈತ, ಕನ್ನಡ ಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಲಕ್ಷ್ಮೇಶ್ವರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಹೋರಾಟದಲ್ಲಿ ಪಕ್ಷಾತೀತ ರೈತ ಪರ ಹೋರಾಟ ವೇದಿಕೆ, ಕಿಸಾನ ಜಾಗೃತಿ ಸಂಘ, ಭಾರತೀಯ ಕಿಸಾನ್ ಸಂಘ, ಕೃಷಿಕ ಸಮಾಜ ನವದೆಹಲಿ, ರಾಷ್ಟ್ರಿಯ ರೈತ ಸಂಘಟನೆ, ಕನ್ನಡ ಪರ ಸಂಘಟನೆಗಳು ಪಾಲ್ಗೊಂಡಿದ್ದವು.
ಪಟ್ಟಣದ ಹಳ್ಳದಕೇರಿ ಹನುಮಂತದೇವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ಹೊಸ ಬಸ್ ನಿಲ್ದಾಣವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ರೈತರು, ರಾಜ್ಯ ಮಟ್ಟದ ರೈತ ಮುಖಂಡರು ರ‌್ಯಾಲಿಯಲ್ಲಿ ಭಾಗವಹಿಸಿದ್ದರು.
ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮತ್ತು ಕೃಷಿಕ ಸಮಾಜ ಅಧ್ಯಕ್ಷೆ ಮಾಣಿಕಮ್ಮ ಚಿಲ್ಲೂರ ಮಾತನಾಡಿ, ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಬರಿಗೈಯಲ್ಲಿದ್ದಾರೆ. ರಾಜ್ಯದಲ್ಲಿ 120 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ, ಲಕ್ಷ್ಮೇಶ್ವರ ತಾಲೂಕಿನಲ್ಲೂ ಮಳೆ ಇಲ್ಲದೆ ತೊಂದರೆಯಾಗಿದ್ದು, ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ನೋವಿಗೆ ಸ್ಪಂದಿಸಬೇಕಿದೆ. ಮಳೆ ಅಭಾವದಿಂದ ಒಣಗಿರುವ ಬೆಳೆಗೆ ಮಧ್ಯಂತರ ಬೆಳೆ ವಿಮೆ ಘೋಷಣೆ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಬೇಕು, ದಿನಕ್ಕೆ 7 ತಾಸು ವಿದ್ಯುತ್ ನೀಡಬೇಕು, ಬೆಳೆ ಸಾಲ ಪಡೆದ ರೈತರಿಗೆ ಬ್ಯಾಂಕುಗಳು ನೀಡುತ್ತಿರುವ ಕಿರುಕುಳ ತಪ್ಪಿಸಬೇಕು, ಕಿಸಾನ್ ಸಮ್ಮಾನ ಯೋಜನೆ ಜಾರಿಗೆ ತರಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಸಿ ಎಂದು ಮನವಿ ಮಾಡಿದರು. ಸುಮಾರು 3 ತಾಸು ರಸ್ತೆಯಲ್ಲಿ ಧರಣಿ ನಡೆಸಿದ್ದಲ್ಲದೆ ಸ್ಥಳದಲ್ಲಿಯೇ ಊಟ ಮಾಡಿದರು.
ಮನೋಹರ ಇನಾಮತಿ, ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಬಸವರಾಜ ಅಸುಂಡಿ, ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೊರೆ, ಚನ್ನಪ್ಪ ಷಣ್ಮುಖಿ, ಪದ್ಮರಾಜ ಪಾಟೀಲ, ಶಿವಾನಂದ ಲಿಂಗಶೆಟ್ಟಿ, ಬಸವರಾಜ ಹೊಗೆಸೊಪ್ಪಿನ, ಪ್ರಕಾಶ ಕೊಂಚಿಗೇರಿಮಠ, ಲೋಕೇಶ ಸುತಾರ, ಟಾಕಪ್ಪ ಸಾತಪೂತೆ, ಚಂಬಣ್ಣ ಬಾಳಿಕಾಯಿ, ಸುಜಾತಾ ದೊಡ್ಡಮನಿ, ಎಸ್.ಪಿ. ಬಳಿಗಾರ, ರಾಮಣ್ಣ ಲಮಾಣಿ(ಶಿಗ್ಲಿ), ಅಶೋಕ ಲಮಾಣಿ, ಬಸವರಾಜ ಹಿರೇಮನಿ, ಚನ್ನಪ್ಪ ಜಗಲಿ, ಹನುಮಂತ ಚಿಂಚಲಿ, ಶಶಿಧರ ದುರ್ಗದ, ರವಿ ಲಿಂಗಶೆಟ್ಟಿ, ಚಂದ್ರಗೌಡ ಪಾಟೀಲ, ಎಸ್.ಪಿ. ಪಾಟೀಲ, ಪಿಡ್ಡನಗೌಡ ಪಾಟೀಲ, ಬಾಪುಗೌಡ ಪಾಟೀಲ, ವಿಠ್ಠಲ್ ನಾಯಕ, ಡಿ.ಜೆ. ಮುಚ್ಚಾಲೆ ಇತರರಿದ್ದರು. ಸಚಿವ ಎಚ್.ಕೆ. ಪಾಟೀಲ ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಿದರು.
ಬೆಳಗ್ಗೆ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವ್ಯಾಪಾರಸ್ಥರು, ಎಪಿಎಂಸಿಯವರು, ಬೀದಿ ಬದಿ ವ್ಯಾಪಾರಸ್ಥರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರಿಂದ ಪಟ್ಟಣದಲ್ಲಿ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಶಾಲಾ-ಕಾಲೇಜುಗಳು ಎಂದಿನಂತಿದ್ದವು. ಕೆಲ ಕಾಲ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿತ್ತು.