ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ

tree
Published on

ಯಲ್ಲಾಪುರ: ಪರಿಸರ ಮತ್ತು ಅರಣ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ವ್ಯಾಪಕ ಸ್ಪಂದನೆ ದೊರಕುತ್ತಿದೆ. ಅರಣ್ಯವಾಸಿಗಳು ಹೆಚ್ಚಿನ ಆಸಕ್ತಿಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದರು.

ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ತಾಲೂಕಿನ ಕಿರವತ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯದಲ್ಲಿ ಅವರು ಮಾತನಾಡಿದರು.

ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಮಾಡುವುದರೊಂದಿಗೆ, ಅರಣ್ಯ ಸಾಂಧ್ರತೆಯನ್ನ ಹೆಚ್ಚಿಸುವಲ್ಲಿ ಸಕ್ರಿಯರಾಗಿರಬೇಕು. ಅರಣ್ಯ ರಕ್ಷಣೆ ಮತ್ತು ಪಾಲನೆ ಮಾಡುವ ಜತೆಗೆ ಅರಣ್ಯ ಭೂಮಿಯ ಮೇಲೆ ಕೃಷಿ ಜೀವನದ ಮೇಲೆ ಅವಲಂಭಿತವಾಗಿರಬೇಕು ಎಂದರು.

ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ ಶೇ. 80 ರಷ್ಟಿದ್ದರೂ ಅರಣ್ಯ ಸಾಂಧ್ರತೆಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ ಎಂದರು.

ಜುಲೈ 31 ರಂದು ಪ್ರಾರಂಭವಾದ ಲಕ್ಷ ವೃಕ್ಷ ನೆಡುವ ಕಾರ್ಯಕ್ರಮ ಆ. 14 ರವರೆಗೂ ಜಿಲ್ಲಾದ್ಯಂತ ಮನೆ, ಮನೆಗಳಲ್ಲಿ ನಡೆಯುತ್ತಿರುವುದರಿಂದ, ಅಂದಿನವರೆಗೆ ಅರಣ್ಯ ಅತಿಕ್ರಮಣದಾರರು ಪ್ರತಿ ಮನೆ, ಮನೆಯಲ್ಲಿಯೂ ಗಿಡ ನೆಡುವ ಕಾರ್ಯ ಹಮ್ಮಿಕೊಳ್ಳಬೇಕು ಎಂದರು.

ವೇದಿಕೆಯ ತಾಲೂಕು ಅಧ್ಯಕ್ಷ ಭೀಮಶಿ ವಾಲ್ಮೀಕಿ, ಸೈಯದ್‌ಸಾಬ ನೂಜವರ, ಲಲಿತಾ ನಾಯ್ಕ, ಈರಪ್ಪ ಅಲಕೇರಿ, ಸಾವಕ್ಕ ಹರಿಜನ, ಮೋಹನ ಸಿದ್ದಿ, ನೀಲವ್ವ ಕಿರವತ್ತಿ, ಬಾಬು ಸಿದ್ದಿ, ಜೈನಾಬಿ ಕಿರವತ್ತಿ, ನುಂಜೊಳ್ಳಿ ಸಿದ್ದಿ, ದ್ಯಾಮಣ್ಣ ಜಗದಳ್ಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net