

ಕೆ.ಎಂ.ದೊಡ್ಡಿ : ವಿಧಾನ ಪರಿಷತ್ ಸದಸ್ಯ, ಬಿಇಟಿ ಟ್ರಸ್ಟ್ ಚೇರ‌್ಮನ್ ಮಧು ಜಿ.ಮಾದೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಜರುಗಿದ ಉದ್ಯೋಗ ಮೇಳಕ್ಕೆ ಗುರುವಾರ ಉತ್ತಮ ಸ್ಪಂದನೆ ದೊರೆಯಿತು.
ಭಾರತೀನಗರದ ಭಾರತೀ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ದೊರೆತು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ನಿರುದ್ಯೋಗಿಗಳ ಉದ್ಯೋಗದ ಕನಸು ಮಾಡಿದ ಭಾರತೀ ಎಜುಕೇಷನ್ ಟ್ರಸ್ಟ್‌ನ ಅಂಗಸಂಸ್ಥೆಗಳಿಗೆ ಉದ್ಯೋಗಾಕಾಂಕ್ಷಿಗಳು ಧನ್ಯವಾದ ಅರ್ಪಿಸಿದರು.
ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಇಂಜಿನಿಯರಿಂಗ್, ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ, ಡಿ ಫಾರ್ಮ್, ಬಿ.ಫಾರ್ಮಸಿ, ನರ್ಸಿಂಗ್, ಎಂ.ಎ, ಎಂ.ಕಾಂ, ಎಂಬಿಎ, ಎಂಎಸ್ಸಿ ವ್ಯಾಸಂಗ ಮಾಡಿರುವವರು ಹಾಗೂ ಅಂತಿಮ ವರ್ಷದಲ್ಲಿ ಓದುತ್ತಿರುವ ನಿರುದ್ಯೋಗಿಗಳು ಸಂದರ್ಶನದಲ್ಲಿ ಉತ್ತೀರ್ಣರಾಗಿ ಸ್ಥಳದಲ್ಲೇ ಉದ್ಯೋಗ ದಕ್ಕಿಸಿಕೊಂಡರು.
ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು. ಕಂಪನಿಯ ಸಿಬ್ಬಂದಿ ಸಂದರ್ಶನ ನಡೆಸಿ ಹಲವರನ್ನು ಆಯ್ಕೆ ಮಾಡಿಕೊಂಡರು. ಉದ್ಯೋಗ ಮೇಳಕ್ಕೆ 1,253 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು ಅದರಲ್ಲಿ 880 ಜನ ಸ್ಥಳದಲ್ಲೇ ಆಯ್ಕೆಯಾದರೆ, 612 ಜನರ ಆಯ್ಕೆಯನ್ನು ಕಾಯ್ದಿರಿಸಲಾಗಿದೆ ಎಂದು ಉದ್ಯೋಗ ಮೇಳದ ಸಂಚಾಲಕ ಪ್ರೊ.ಎಸ್. ಜವರೇಗೌಡ ಮಾಹಿತಿ ನೀಡಿದರು.
ಕಾರ್ಯಕ್ರಮ ಭಾರತೀ ಕಾಲೇಜಿನ ಕುವೆಂಪು ಸಭಾಗಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್‌ನ ಅಂಗಸಂಸ್ಥೆ, ಮಧು ಜಿ. ಮಾದೇಗೌಡ ಅಭಿಮಾನಿ ಬಳಗ, ಆಶಯ್ ಮಧು ಅಭಿಮಾನಿ ಬಳಗ, ಎಸ್.ವಿ. ರಿಕ್ರೂಟೆಕ್ ಸಹಯೋಗದಲ್ಲಿ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಗೀಡಕ್ಕೆ ನೀರು ಹಾಕುವ ಮೂಲಕ ಬಿಇಟಿ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಚಾಲನೆ ನೀಡಿ ಮಾತನಾಡಿ, ಹಳ್ಳಿಗಾಡಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ರೈತ ಹೋರಾಟಗಾರ, ಹಿರಿಯ ಗಾಂಧಿವಾದಿ, ಮಾಜಿ ಸಂಸದ ದಿ. ಜಿ.ಮಾದೇಗೌಡ ಸ್ಥಾಪಿಸಿದ ಭಾರತೀ ವಿದ್ಯಾಸಂಸ್ಥೆ ಶರವೇಗದಲ್ಲಿ ಬೆಳೆಯುತ್ತ ಸಾವಿರಾರು ಜನರಿಗೆ ದಾರಿದೀಪವಾಗಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉದ್ಯೋಗದಲ್ಲಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಗೌಡರು ವಿದ್ಯಾಸಂಸ್ಥೆಯ ಜತೆಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂಬ ದಾವಂತದಿಂದ ಕಾರ್ಖಾನೆಗೆ ಷೇರು ಸಂಗ್ರಹಿಸಿದರು. ಆದರೆ ಹಲವು ಕಾನೂನಿನ ತೊಡಕು ಉಂಟಾಯಿತು. ಆದರೂ ಛಲ ಬೀಡದೆ ತಮಿಳುನಾಡಿನ ಶಕ್ತಿ ಷುಗರ್ಸ್ ಚೇರ‌್ಮನ್ ದಿವಂಗತ ಡಾ. ಮಹಾಲಿಂಗಂ ಜತೆ ಕೈ ಜೋಡಿಸಿ ಅವರಿತ ಶ್ರಮದಿಂದ ಚಾಂಶುಗರ್ಸ್ ಕಾರ್ಖಾನೆ ಸ್ಥಾಪಿಸಲು ಕಾರಣರಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮೆಲುಕು ಹಾಕಿದರು.
ತನ್ನ ತಂದೆ ಹಾದಿಯಲ್ಲಿ ನಡೆಯುತ್ತಿರುವ ಎಂಎಲ್ಸಿ ಮಧು ಜಿ.ಮಾದೇಗೌಡ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಬೇಕು ಎಂಬ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಸುತ್ತ ಹಲವರಿಗೆ ಕೆಲಸ ಸಿಗಲಿ ಎಂದು ಹಾರೈಸಿದರು.
ಎಸ್‌ವಿ ರಿಕ್ರೂಟೆಕ್ ಮುಖ್ಯಸ್ಥ ಎಸ್.ಜೀವನ್ ಉದ್ಯೋಗ ಆಕಾಂಕ್ಷಿಗಳಿಗೆ ಮಾಹಿತಿ ನೀಡಿದರು. ಈ ವೇಳೆ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ, ವಿವಿಧ ಅಂಗಸಂಸ್ಥೆಯ ಮುಖ್ಯಸ್ಥರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಪ್ರೊ.ಎಸ್. ನಾಗರಾಜು, ಡಾ.ಎಸ್.ಎಲ್. ಸುರೇಶ್, ಡಾ. ತಮಿಜ್‌ಮಣಿ, ಪ್ರೊ.ಎಸ್.ಜವರೇಗೌಡ, ಜಿ.ಬಿ. ಪಲ್ಲವಿ, ಬಿ.ಕೆ. ಕೃಷ್ಣ ಇದ್ದರು.
-----------
27ಏಒಆ-1 ಉದೋಗ ಮೇಳಕ್ಕೆ ಬಿಇಟಿ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಚಾಲನೆ ನೀಡಿದರು.
27ಏಒಆ-1ಂ ಉದೋಗ ಮೇಳದಲ್ಲಿ ಮಾಹಿತಿ ಪಡೆದು ಕೊಳ್ಳುತ್ತಿರುವ ಉದ್ಯೋಗಾಂಕ್ಷಿಗಳು
---------------