

ಮೈಸೂರು: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ನೂರಾರು ಪೌರ ಕಾರ್ಮಿಕರು ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ತಪಾಸಣೆಗಳನ್ನು ಮಾಡಿಸಿಕೊಂಡರು. ಜತೆಗೆ, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಿಂದಲೂ ಅಗತ್ಯ ಸಲಹೆಗಳನ್ನು ಪಡೆದುಕೊಂಡರು.
ನಗರದ ಸ್ವಚ್ಛತೆ, ಸಾರ್ವಜನಿಕರ ಆರೋಗ್ಯಕ್ಕಾಗಿ ತಮ್ಮ ಆರೋಗ್ಯವನ್ನೂ ಪಣಕ್ಕಿಟ್ಟು ನಿರಂತರವಾಗಿ ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಮೈಸೂರು ಸತತ ಎಡರು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆಯಲು ಕಾರಣರಾಗಿರು ಪೌರ ಕಾರ್ಮಿಕರು ತಮಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉಪಯೋಗ ಪಡೆದುಕೊಂಡರು.
ಜನಪರ ಕಾಳಜಿಯಲ್ಲಿ ಸದಾ ಮುಂದಿರುವ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿ ವಾಹಿನಿಯು ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಉಚಿತ ಶಿಬಿರ ಆಯೋಜಿಸುವ ಮೂಲಕ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆಯಿತು. ಅಭಿವೃದ್ಧಿ ವರದಿಗಳು, ನಾನಾ ಸುದ್ದಿಗಳು, ವಿಶೇಷ ಲೇಖನಗಳ ಮೂಲಕ ಸಮಾಜದ ಅಭಿವೃದ್ಧಿಯ ಬಗ್ಗೆ ಜನ ಪ್ರತಿನಿಧಿಗಳ ಕಣ್ತೆರೆಸಿ, ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದರಲ್ಲಿ ಮುಂದಿರುವ ವಿಜಯವಾಣಿ ಪತ್ರಿಕೆಯು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಜತೆಗೂಡಿ ಪೌರ ಕಾರ್ಮಿಕರ ಆರೋಗ್ಯಕ್ಕೂ ಮಿಡಿಯಿತು.
ಶಿಬಿರಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ.ಎಂ.ಎನ್.ರವಿ, ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಪೌರ ಕಾರ್ಮಿಕ ಸಂಘದ ಉನ್ನತ ಸಮಿತಿ ಅಧ್ಯಕ್ಷ ಮಾರ, ಪ್ರಧಾನ ಕಾರ್ಯದರ್ಶಿ ರಾಚಯ್ಯ, ಪೌರ ಕಾರ್ಮಿಕರಾದ ವೆಂಕಟಮ್ಮ ಇದ್ದರು.