ಜಿಲ್ಲೆ ಬಂದ್​ಗೆ ಉತ್ತಮ ಪ್ರತಿಕ್ರಿಯೆ

9 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೇಂದ್ರ ಸಚಿವ ಅಮಿತ್​ ಷಾ ಅವರು ಡಾ. ಬಾಬಾ ಸಾಹೇಬ ಅಂಬೇಡ್ಕರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ಗುರುವಾರ ನೀಡಿದ್ದ ಧಾರವಾಡ ಜಿಲ್ಲೆ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆ ಚಳಿಯಲ್ಲೇ ಜುಬಿಲಿ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೆಲ ಹೊತ್ತು ಕೇಂದ್ರ ಸರ್ಕಾರ, ಸಚಿವ ಅಮಿತ್​ ಷಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಂದ್​ ಕರೆ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್​ ಮಾಡಿದ್ದರಿಂದ ಇಡೀ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು. ಅಲ್ಲಲ್ಲಿ ತೆರೆದಿದ್ದ ಕೆಲ ಅಂಗಡಿಗಳನ್ನು ಪ್ರತಿಭಟನಾಕಾರರು ಬಂದ್​ ಮಾಡಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಿದ್ದಲ್ಲದೆ, ಬಸ್​ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಬೆಳಗಾವಿ ಕಡೆಯಿಂದ ಆಗಮಿಸಿದ ಬಸ್​ಗಳನ್ನು ನರೇಂದ್ರ ಕ್ರಾಸ್​ ಬಳಿ ತಡೆಯಲಾಗಿತ್ತು. ಹೀಗಾಗಿ ಬೇರೆ ಊರುಗಳಿಂದ ಆಗಮಿಸಿದ್ದ ಜನರು ಹಾಗೂ ಖಾಸಗಿ ಕಂಪನಿಗಳಿಗೆ ತೆರಳುವವರು ಆಟೋಗಳನ್ನೇ ನೆಚ್ಚಿಕೊಳ್ಳುವಂತಾಗಿತ್ತು. ಪ್ರತಿಭಟನಾಕಾರರು ತಂಡವಾಗಿ ನಗರ ಸಂಚಾರ ನಡೆಸುವ ಸಮಯದಲ್ಲಿ ಬೈಕ್​ ಮೇಲೆ ತೆರಳುತ್ತಿದ್ದವರನ್ನು ತಡೆದು ಚಕ್ರದ ಗಾಳಿ ಬಿಟ್ಟ ಟನೆಗಳೂ ನಡೆದಿವೆ.

ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ: ಪ್ರತಿಭಟನೆ ಸಮಯದಲ್ಲಿ ಸಂಘಟನೆಗಳ ಪದಾಧಿಕಾರಿಗಳು ವ್ಯಾಪಾರಸ್ಥರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ದಬ್ಬಾಳಿಕೆ ನಡೆಸಿದ ಘಟನೆ ನಡೆದಿವೆ. ನಗರದ ಹೊರವಲಯದಲ್ಲಿನ ಅಂಗಡಿಗಳನ್ನು ಬಂದ್​ ಮಾಡಿಸಲು ಬೈಕ್​ ಮೂಲಕ ತೆರಳಿದ ಪ್ರತಿಭಟನಾಕಾರರು, ಶ್ರೀನಗರ ಬಳಿ ರಸ್ತೆ ಪಕ್ಕದಲ್ಲಿ ಉಪಾಹಾರ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಅಂಗಡಿ ಬಂದ್​ ಮಾಡುವಂತೆ ಹೇಳುವ ಬದಲು ಆತನ ಮೇಲೆ ಕೈ ಮಾಡಿ ಕ್ರೌರ್ಯ ಮೆರೆದಿದ್ದಾರೆ.

ಇನ್ನು ಸರ್​ ಸಿದ್ದಪ್ಪ ಕಂಬಳಿ ಕಾನೂನು ವಿದ್ಯಾಲಯಕ್ಕೆ ನುಗ್ಗಿದ ಪ್ರತಿಭಟನಾಕಾರರು ಒತ್ತಾಯ ಪೂರ್ವಕ ಕಾಲೇಜು ಬಂದ್​ ಮಾಡಿಸಿದರು. ಈ ಸಮಯದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜತೆಗೆ ವಾಗ್ವಾದ ನಡೆಸಿದ್ದಲ್ಲದೆ, ನೂಕಾಟ ನಡೆಸಿ ದುರ್ವರ್ತನೆ ತೋರಿದ್ದಾರೆ. ಬಲವಂತದ ಬಂದ್​ಗೆ ಮುಂದಾದರೆ ಕಾನೂನು ಕ್ರಮ ಎಂದು ಪೊಲೀಸ್​ ಆಯಕ್ತರು ಎಚ್ಚರಿಸಿದ್ದರು. ಆದರೆ ಬಲವಂತವಾಗಿ ಬಂದ್​ ಮಾಡಿಸಿದರೂ ಪ್ರತಿಭಟನಾಕಾರರ ಮೇಲೆ ಕ್ರಮವಾಗಿಲ್ಲ.

ಅಹಿತರಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಿದ್ದ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸುವ ಮೂಲಕ ಬಿಗಿ ಬಂದೋಬಸ್ತ್​ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net