

ಮಂಡ್ಯ : ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮದ್ದೂರು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂತು.
ಬಂದ್ ಹಿನ್ನೆಲೆಯಲ್ಲಿ ಆಸ್ಪತ್ರೆ, ಔಷಧ ಹಾಗೂ ಹಾಲಿನ ಕೇಂದ್ರಗಳು ಹೊರತುಪಡಿಸಿ ಉಳಿದೆಲ್ಲ ವಹಿವಾಟು ಸ್ತಬ್ಧಗೊಂಡಿತ್ತು. ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ ಕಾರಣ ಮದ್ದೂರು ಪಟ್ಟಣದ ಪೇಟೆ ಬೀದಿಯಲ್ಲಿ ಜನಸಂಖ್ಯೆ ವಿರಳವಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಚಿತ್ರಮಂದಿರಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಬಂದ್ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸಲಿಲ್ಲ. ಮದ್ದೂರು, ಕೊಪ್ಪ, ಬೆಸಗರಹಳ್ಳಿ, ಕೆಸ್ತೂರು, ಕೆ.ಹೊನ್ನಲಗೆರೆ ಸೇರಿದಂತೆ ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಯಿತು.
ಬೈಕ್ ರ‌್ಯಾಲಿ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆ, ರೈತಸಂಘಟನೆ, ವರ್ತಕರಸಂಘ, ಸವಿತಾ ಸಮಾಜ, ನೆರವು ಕಟ್ಟಡ ಕಾರ್ಮಿಕರ ಸಂಘ, ಜನಶಕ್ತಿ ಸಂಘಟನೆ, ತಮಿಳು ಶ್ರಮಿಕರ ಸಂಘ, ಒಕ್ಕಲಿಗರ ಸಂಘ, ಛಾಯಗ್ರಾಹಕರ ಸಂಘ, ಮುಸ್ಲಿಂ, ಮಾರ್ವಾಡಿ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಬೈಕ್ ಜಾಥಾದಲ್ಲಿ ಭಾಗವಹಿಸಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.
ಮುಸ್ಲಿಮರ ಬೆಂಬಲ: ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ನಂತರ ಸಾಮೂಹಿಕವಾಗಿ ಮುಸ್ಲಿಮರು ಪ್ರಗತಿಪರ ಸಂಘಟನೆಗಳ ಒಕ್ಕೂಟದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಿ.ಸಿ.ಉಮಾಶಂಕರ್, ಸೊ.ಶಿ.ಪ್ರಕಾಶ್, ಚನ್ನಸಂದ್ರ ಲಕ್ಷ್ಮಣ್, ವಳಗೆರೆಹಳ್ಳಿ ಉಮೇಶ್, ತಿಪ್ಪೂರು ರಾಜೇಶ್, ಕುಂದನಕುಪ್ಪೆ ಕುಮಾರ್, ಸೊಮನಹಳ್ಳಿ ಅಂದಾನಿ, ಮರಳಿಗ ಶಿವರಾಜ್, ನ.ಲಿ.ಕೃಷ್ಣ, ಗೊರವನಹಳ್ಳಿ ಪ್ರಸನ್ನ, ಬಿ.ವಿ.ಶಂಕರೇಗೌಡ, ಶಿವಲಿಂಗೇಗೌಡ, ಪ್ರಭುಸ್ವಾಮಿ, ಬಸವರಾಜು, ಸುರೇಶ್, ದೇವ್‌ಕುಮಾರ್, ಶಶಿಕುಮಾರ್, ಆದಿಲ್ ಆಲಿಖಾನ್ ಇತರರು ಇದ್ದರು.