ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

29skpp1 bagvanth kooba
Published on


ಸಕಲೇಶಪುರ : ರಾಜ್ಯದ ಎಲ್ಲೆಡೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ಭಗವಂತ್ ಖೂಬ ಹೇಳಿದರು.


ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 75 ಸಾವಿರಕ್ಕೂ ಅಧಿಕ ಜನರಿಗೆ ಸದಸ್ಯತ್ವ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಭ್ರಷ್ಟಾಚಾರ ಮಾಡಿಲ್ಲ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದರು. ಇದೀಗ ಸ್ವಂತ ಅವರ ಪರಿವಾರದ ಜತೆ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ವಿಚಾರವಾಗಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಆದರೂ ಸಹ ಸಿದ್ದರಾಮಯ್ಯ ಬಂಡತನ ತೋರಿ ಹೈ ಕೋರ್ಟ್ ಬಾಗಿಲು ತಟ್ಟಿದ್ದರು ಎಂದು ಕಿಡಿಕಾರಿದರು.


ರಾಜ್ಯಪಾಲರ ಆದೇಶ ಸರಿಯಾಗಿದೆ ಎಂದು ಕೋರ್ಟ್ ತೀರ್ಪು ನೀಡಿದ ಮೇಲೆ ನ್ಯಾಯಾಲಯದಲ್ಲೂ ಕೂಡ ಸಿದ್ದರಾಮಯ್ಯ ಅವರಿಗೆ ಹಿನ್ನೆಡೆಯಾಗಿದೆ. ಅದು ಅಲ್ಲದೆ ಜನಪ್ರತಿನಿಧಿಗಳ ಕೋರ್ಟ್ ಕೂಡ ಲೋಕಾಯುಕ್ತದಲ್ಲಿ ಕೇಸ್ ದಾಖಲಿಸಲು ಸೂಚನೆ ನೀಡಿದೆ. ಆದರೂ ಇಂತ ಬಂಡ ಮುಖ್ಯಮಂತ್ರಿ ಸಭ್ಯತೆವಿರುವ ಕರ್ನಾಟಕದಲ್ಲಿ ಕೆಟ್ಟ ಸಂಸ್ಕೃತಿಗೆ ನಾಂದಿ ಹಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ಕಾಂಗ್ರೆಸ್‌ನವರು ಯಾವಾಗಲು ನಾವು ಸಂವಿಧಾಮ ಉಳಿಸುತ್ತೇವೆ. ಪ್ರಜಾಪ್ರಭುತ್ವ ಗೌರವಿಸುತ್ತೇವೆ ಈ ನೆಲದ ಕಾನೂನಿಗೆ ತಲೆಬಾಗುತ್ತೇವೆ ಎಂದು ವಾದ ಮಂಡಿಸುತ್ತಾರೆ. ಆದರೆ ಇವೆಲ್ಲವನ್ನು ಇದೀಗ ಗಾಳಿಗೆ ತೂರಿದ್ದಾರೆ. ನ್ಯಾಯಾಲಯದ ತೀರ್ಪನ್ನು ರಾಜಕೀಯ ಪ್ರೇರಿತ ಎನ್ನುತ್ತಾ ಕೋರ್ಟ್ ಆದೇಶವನ್ನು ನಿಂದನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಇದೆ ವೇಳೆ ಪಟ್ಟಣದ ಬೂತ್ ಸಂಖ್ಯೆ 86 ರ ಪ್ರಮುಖ್ ನವೀನ್ ಶೆಟ್ಟಿ ಮನೆಯಲ್ಲಿ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕರ್ತರ ಜತೆ ವೀಕ್ಷಣೆ ಮಾಡಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಗರ ಘಟಕದ ಅಧ್ಯಕ್ಷ ಲೋಕೇಶ್ (ದಿಂಬು), ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ತಾಲೂಕು ಬಿಜೆಪಿ ವಕ್ತಾರ ಸಾ.ಸು.ವಿಶ್ವನಾಥ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net