ಬಿಡಿಎ ಫ್ಲ್ಯಾಟ್ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

bda flats
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಣಿಮಿಣಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಫ್ಲ್ಯಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೇಳದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, 175 ಫ್ಲ್ಯಾಟ್‌ಗಳನ್ನು ಖರೀದಿಸಿದರು. ಇದರಲ್ಲಿ 75 ಮಂದಿ ಫ್ಲ್ಯಾಟ್ ಘಟಕದ ಆರಂಭಿಕ ಠೇವಣಿಯನ್ನು ಸ್ಥಳದಲ್ಲಿಯೇ ಪಾವತಿಸಿ ಹಂಚಿಕೆ ಪತ್ರ ಪಡೆದರು.

ಕಳೆದ ತಿಂಗಳು ಆಯೋಜಿಸಿದ್ದ ಫ್ಲ್ಯಾಟ್ ಮೇಳಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿಯೂ ನಾಗರಿಕರು ಕಣಿಮಿಣಿಕೆ ವಸತಿ ಸಮುಚ್ಛಯದ ವಿವಿಧ ಘಟಕಗಳನ್ನು ಖರೀದಿಸಿದರು. 75 ಮಂದಿ ಆರಂಭಿಕ ಠೇವಣಿ ಪಾವತಿಸಿದ್ದು, ಇನ್ನೂ 25 ಮಂದಿ ಚೆಕ್ ನೀಡಿದ್ದು, ಸೋಮವಾರ ಆರ್‌ಟಿಜಿಎಸ್ ಮೂಲಕ ಹಣ ಪಾವತಿಯಾದ ಬಳಿಕ ಹಂಚಿಕೆ ಪತ್ರ ನೀಡಲಾಗುವುದು ಎಂದು ಪ್ರಾಧಿಕಾರದ ವಸತಿ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮೇಳದಲ್ಲಿ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಭಾಗಿಯಾಗಿ ಸಾರ್ವಜನಿಕರಿಗೆ ಫ್ಲ್ಯಾಟ್ ಖರೀದಿಸಲು ಆರ್ಥಿಕ ಸಾಲ ನೀಡುವ ಕಾರ್ಯಕ್ರಮಗಳನ್ನು ವಿವರಿಸಿ ಸೌಲಭ್ಯ ಒದಗಿಸಿದರು.

ಫ್ಲ್ಯಾಟ್ ಮೇಳದಲ್ಲಿ ಬಿಡಿಎ ಆರ್ಥಿಕ ಸದಸ್ಯ ಡಾ. ಎ.ಲೋಕೇಶ್ ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಮೂರ್ತಿ, ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಇಂಬವಳ್ಳಿ, ಬಸವರೆಡ್ಡಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net