ಸಿಂಧನೂರು: ಮುಂಗಾರು ಮತ್ತು ಹಿಂಗಾರು ಹಂಗಾಮಿನ ಜೋಳ ಖರೀದಿಗೆ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕರೆ ನೀಡಿದ್ದ ಸಿಂಧನೂರು ಬಂದ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಗಾಂಧಿವೃತ್ತದಿಂದ ಬಸವ ವೃತ್ತ, ಹಳೇ ಬಜಾರ್, ಮಹಾವೀರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವತ್ತ, ಕನಕದಾಸ ವೃತ್ತದ ಮೂಲಕ ತಹಸಿಲ್ ಕಚೇರಿವರೆಗೆ ವಿವಿಧ ಸಂಘಟನೆಗಳ ಮುಖಂಡರು, ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಗಿ ಮಾತನಾಡಿ, ಡಿ.31ಕ್ಕೆ ನೋಂದಣಿ ಹಾಗೂ ಜ.31 ರೊಳಗೆ ಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ನಾಲ್ಕು ತಿಂಗಳ ನಂತರ ಮೇನಲ್ಲಿ ಖರೀದಿ ಆರಂಭಿಸಿದ್ದರಿಂದ ಜೋಳದಲ್ಲಿ ನುಸಿ ಮತ್ತು ಹುಳು ಕಾಣಿಸಿದೆ. ಇದಕ್ಕೆ ಸರ್ಕಾರದ ವಿಳಂಬ ನೀತಿ ಕಾರಣವೇ ಹೊರತು ರೈತರಲ್ಲ.
ಇದರಿಂದ ರೈತರು ಅರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನುಸಿ ಮತ್ತು ಹುಳು ಇದೆ ಎಂಬ ನೆಪವೊಡ್ಡಿ ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳು ಜೋಳ ಖರೀದಿಗೆ ನಿರಾಕರಿಸಿರುವುದು ಖಂಡನೀಯ. ಕೂಡಲೇ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಎಲ್ಲ ಜೋಳವನ್ನು ಖರೀದಿ ಮಾಡಲು ಆದೇಶಿಸಬೇಕು. ಯಾವುದೇ ಕಾರಣಕ್ಕ್ಕೂ ವಿಳಂಬ ಮಾಡುವಂತಿಲ್ಲ ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್, ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತರಾಯಗೌಡ ಕಲ್ಲೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರೇಬಾಳ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಗೋಡಿಹಾಳ, ಬಸವಕೇಂದ್ರದ ತಾಲೂಕು ಅಧ್ಯಕ ್ಷ ಕರೇಗೌಡ ಕುರುಕುಂದಾ, ಶರಣ ಸಾಹಿತ್ಯ ಪರಿಷತ್ ತಾಲೂಕು ಸಂಚಾಲಕ ವೀರಭದ್ರಗೌಡ ಅಮರಾಪುರ, ವಕೀಲರ ಸಂಘ, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.
ತೊಂದರೆ ಅನುಭವಿಸಿದ ಜನರು
ಸಿಂಧನೂರು ನಗರದಲ್ಲಿ ಬೆಳಗ್ಗೆಯಿಂದಲೇ ಅಂಗಡಿ-ಮುಂಗಟ್ಟುಗಳು, ಶಾಲಾ-ಕಾಲೇಜು, ಸರ್ಕಾರಿ ಬಸ್ ಸಂಚಾರ, ಎಪಿಎಂಸಿ ವಹಿವಾಟು ಸಂಪೂರ್ಣ ಬಂದ್ ಆಗಿತ್ತು. ಶ್ರೀಪುರಂ ಜಂಕ್ಷನ್, ಪಿಡಬ್ಲ್ಯುಡಿ ಕ್ಯಾಂಪ್‌ನ ಮಸ್ಕಿ, ರಾಯಚೂರು ರಸ್ತೆ ಮಾರ್ಗ ಹಾಗೂ ಕುಷ್ಟಗಿ ಹೆದ್ದಾರಿಗಳನ್ನು ಪ್ರತಿಭಟನಾಕಾರರು ಸಂಪೂರ್ಣ ಬಂದ್ ಮಾಡಿದ್ದರು. ಇದರಿಂದ ಮದುವೆ ಸೇರಿ ಇತರ ಕಾರ್ಯಕ್ರಮಗಳಿಗೆ ತೆರಳಬೇಕಿದ್ದ ಜನರು ತೊಂದರೆ ಅನುಭವಿಸಿದರು. ಕೊನೆಗೆ ಒಳ ರಸ್ತೆಗಳ ಮೂಲಕ ತೆರಳುತ್ತಿರುವುದು ಕಂಡುಬಂತು. ಶ್ರೀಪುರಂ ಜಂಕ್ಷನ್ ಬಳಿ ಬಳ್ಳಾರಿ, ಗಂಗಾವತಿ ಮಾರ್ಗ ಬಂದ್ ಮಾಡಿದ್ದರಿಂದ ಲಾರಿ, ಬಸ್ ಸೇರಿದಂತೆ ವಿವಿಧ ವಾಹನಗಳು ಕಿಮೀಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾಯಿತು. ಸೋಮವಾರ ಕುರಿ ಸಂತೆ ಇದ್ದರಿಂದ ಬೇರೆ ಊರುಗಳಿಂದ ಬಂದ ಜನರು, ಬಸ್ ಸಂಚಾರ ಇಲ್ಲದೆ ಪರದಾಡಬೇಕಾಯಿತು.