ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಂದ ಉತ್ತಮ ಸ್ಪಂದನೆ: ಮಧು ಬಂಗಾರಪ್ಪ

minister madhu bangarappa
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
Published on

ಶಿವಮೊಗ್ಗ: ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಜನ ಬೇಸತ್ತಿದ್ದು, ಈ ಬಾರಿ ಬದಲಾವಣೆ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ರಾಜ್ಯದಲ್ಲಿ ಒಳ್ಳೆಯ ರೀತಿ ಚುನಾವಣೆ ನಡೆಯುತ್ತಿದೆ. ಲೋಕಸಭಾ ವ್ಯಾಪ್ತಿಯ ಎಲ್ಲ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ. ಕಾರ್ಯಕರ್ತರು, ಮುಖಂಡರು, ಶಾಸಕರು ಹೀಗೆ ಎಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮತ ಕೇಳಲು ಹೋದವರನ್ನು ಮನೆಯೊಳಗೆ ಕರೆದು ಗ್ಯಾರಂಟಿಗಳನ್ನು ಪಡೆಯುತ್ತಿರುವುದಾಗಿ ಹೇಳಿ ಟೀ, ಕಾಫಿ ಕೊಡುವುದನ್ನು ನೋಡಿದರೆ ಹೃದಯ ತುಂಬಿಬರುತ್ತದೆ. ಎಐಸಿಸಿ ರಾಹುಲ್ ಗಾಂಧಿ ಅವರು ಶಿವಮೊಗ್ಗಕ್ಕೆ ಬಂದು ಹೋಗಿದ್ದು ನಮಗೆ ಆನೆ ಬಲ ಬಂದಂತಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಸೇರಿ ಹಲವರು ಬಂದು ಪ್ರಚಾರ ಮಾಡಿರುವುದು ನಮ್ಮ ಗೆಲುವನ್ನು ಇನ್ನೂ ಹತ್ತಿರಕ್ಕೆ ಕರೆತಂದಿದೆ ಎಂದರು.
ಗೀತಾ ಶಿವರಾಜ್‌ಕುಮಾರ್ ಅವರ ಮತ ಸೊರಬದಲ್ಲಿಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ ನಿಲ್ಲುತ್ತಾರೆ. ಅಲ್ಲಿ ಅವರಿಗೆ ಮತ ಇದೆಯೇ ಎಂದು ಪ್ರಶ್ನಿಸಿದರು. ಮಾಜಿ ಸಚಿವ, ಸಹೋದರ ಕುಮಾರ್‌ಬಂಗಾರಪ್ಪ ಅವರ ಟೀಕೆಗೆ ಉತ್ತರ ಕೊಡುವುದಿಲ್ಲ. ಅವರು ಇಷ್ಟು ದಿನ ಎಲ್ಲಿಗೆ ಹೋಗಿದ್ದರು. ಈಗ ಏಕೆ ಬಂದರು? ಈ ಎರಡು ಪ್ರಶ್ನೆಗಳಿಗೆ ಉತ್ತರ ಹೇಳಲಿ ಸಾಕು ಎಂದರು.
ಕಾಡಾನೆ ದಾಳಿಯಿಂದ ಒಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೇನೆ. ಕೆಎ್ಡಿ ಕಾಯಿಲೆ ಬಗ್ಗೆಯೂ ವರದಿಯಾಗಿದೆ. ಆರೋಗ್ಯಾಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇನೆ. ಚುನಾವಣೆ ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ, ಪ್ರಮುಖರಾದ ಕಲೀಂ ಪಾಷಾ, ಜಿ.ಡಿ.ಮಂಜುನಾಥ್, ಜಿ.ಪದ್ಮನಾಭ್, ಶಿ.ಜು.ಪಾಷಾ, ಪರ್ವೀಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net