ಯುವ ಕಬಡ್ಡಿ-5ಗೆ ಉತ್ತಮ ಸ್ಪಂದನೆ

15 - Copy
Published on

ಪ್ರೊ ಕಬಡ್ಡಿ ಮಾದರಿಯಲ್ಲಿ ಮೈಸೂರಿನ ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಯುವ ಕಬಡ್ಡಿ ಸರಣಿಯ ಬೇಸಿಗೆ ಆವೃತ್ತಿ -2023(‘ಯುವ ಕಬಡ್ಡಿ’-5)ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಸರಣಿಯ ಸಿಇಒ ವಿಕಾಸ್ ಗೌತಮ್ ತಿಳಿಸಿದರು.


ಯುವ ಕಬಡ್ಡಿ ಸರಣಿಯ 5ನೇ ಆವೃತ್ತಿ ಇದಾಗಿದೆ. ಜೂನ್ 17 ರಿಂದ ನಡೆಯುತ್ತಿರುವ ಆವೃತ್ತಿ, ಜು. 19 ರವರೆಗೆ ನಡೆಯಲಿದೆ. ಕರ್ನಾಟಕ ಸೇರಿದಂತೆ ಒಟ್ಟು 9 ತಂಡಗಳು ಭಾಗವಹಿಸಿವೆ. ಈ ಪೈಕಿ ತಮಿಳುನಾಡು ಹಾಗೂ ರಾಜಸ್ಥಾನದ ತಲಾ ಎರಡು ತಂಡಗಳು ಆಡುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುವ ಕಬಡ್ಡಿ ಆಟಗಾರರನ್ನು ಪ್ರೋತ್ಸಾಹಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಹಾಗಾಗಿ, ಟೂರ್ನಿಯಲ್ಲಿ 23 ವರ್ಷದ ಒಳಗಿನ ಮತ್ತು 80 ಕೆ.ಜಿ. ಒಳಗಿನ 160 ಕ್ರೀಡಾಪಟುಗಳು ಆಡುತ್ತಿದ್ದಾರೆ ಎಂದರು.

ಮೊದಲ ಆವೃತ್ತಿಯನ್ನು ಜೈಪುರದಲ್ಲಿ ನಡೆಸಲಾಗಿತ್ತು. ಬಳಿಕ ರಾಂಚಿಯಲ್ಲಿ ದ್ವಿತೀಯ ಆವೃತ್ತಿ, ಪಾಂಡಿಚೇರಿಯಲ್ಲಿ ತೃತೀಯ ಆವೃತ್ತಿ ಹಾಗೂ ಪುನಾದಲ್ಲಿ ನಾಲ್ಕನೇ ಆವೃತ್ತಿ ನಡೆಸಲಾಗಿದೆ. ಯುವ ಕಬಡ್ಡಿ ಸರಣಿಯಲ್ಲಿ ಆಡಿರುವ 26ಕ್ಕೂ ಹೆಚ್ಚು ಆಟಗಾರರು ಪ್ರೊ ಕಬಡ್ಡಿ ಹಾಗೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಇದೀಗ ಮೈಸೂರಿನಲ್ಲಿ ನಡೆಯುತ್ತಿರುವ ಆವೃತ್ತಿಯಲ್ಲಿ ರಾಜಸ್ಥಾನದ ಅರವಾಳಿ ಆರೋವ್ಸ್, ಪೆರಿಯಾರ್ ಪ್ಯಾಂಥರ್ಸ್, ಪಾಂಡಿಚೇರಿಯ ಚೋಳ ವೀರನ್ಸ್, ಅಸ್ಸಾಂನ, ಮಣಿಪುರ ಮತ್ತು ತ್ರಿಪುರ ರಾಜ್ಯಗಳ ಕಾಜಿರಂಗ ರೈನೋಸ್, ತಮಿಳುನಾಡಿನ ಪಳನಿ ಟಸ್ಕರ್ಸ್, ಜಾರ್ಖಂಡ್‌ನ ಸಿಂಧ್ ಸೋನಿಕ್ಸ್, ಕರ್ನಾಟಕದ ಹಂ ಹೀರೋಸ್, ಛತ್ತೀಸ್‌ಘಡ್‌ನ ಚಂಬಲ್ ಚಾಲೆಂಜರ್ಸ್, ತಮಿಳುನಾಡಿನ ನೀಲಗಿರಿ ನೈಟ್ಸ್ ತಂಡಗಳು ಭಾಗಿಯಾಗಿವೆ. ಟೂರ್ನಿಯಲ್ಲಿ ಈಗಾಗಲೇ 78 ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಫೈನಲ್ ಸೇರಿದಂತೆ 45 ಪಂದ್ಯಗಳು ಬಾಕಿ ಇವೆ ಎಂದು ವಿವರಿಸಿದರು.

ಜು. 19ರಂದು ಫೈನಲ್ ಪಂದ್ಯ ನಡೆಯಲಿದ್ದು, ಸಾರ್ವಜನಿಕರಿಗೆ ಎಲ್ಲ ಪಂದ್ಯಗಳನ್ನು ಉಚಿತವಾಗಿ ನೋಡಲು ಅವಕಾಶ ಕಲ್ಪಿಸಲಾಗಿದೆ. ಚಾಂಪಿಯನ್ ತಂಡಕ್ಕೆ 20 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. 2ನೇ ಸ್ಥಾನಕ್ಕೆ 10 ಲಕ್ಷ ರೂ., 3ನೇ ಸ್ಥಾನಕ್ಕೆ 5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ನಂತರದ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ 2 ಲಕ್ಷ ರೂ., 1 ಲಕ್ಷ ರೂ. ಹಾಗೂ 50 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.ಸಂಯೋಜಕ ಬಿಂದು ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net