ಮೆಸ್ಕಾಂ ಆ್ಯಪ್ ಹತ್ತು ಸಾವಿರ ಡೌನ್‌ಲೋಡ್

mescom
Published on

ಉಡುಪಿ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ(ಮೆಸ್ಕಾಂ) ಗ್ರಾಹಕರ ಅನುಕೂಲಕ್ಕೆ ಬಿಲ್ ಪಾವತಿ ಸಂಬಂಧಿಸಿದ ಸೇವೆಗಾಗಿ ‘ನನ್ನ ಮೆಸ್ಕಾಂ’ ಆ್ಯಪ್ ಬಿಡುಗಡೆಗೊಳಿಸಿದ್ದು, ಒಂದು ತಿಂಗಳಲ್ಲಿ 10 ಸಾವಿರಕ್ಕೂ ಅಧಿಕ ಜನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಕೋವಿಡ್ -19 ಹಿನ್ನೆಲೆಯಲ್ಲಿ ಹೆಚ್ಚಿನ ಎಲ್ಲ ಇಲಾಖೆಗಳೂ ಆನ್‌ಲೈನ್ ಸೇವೆಗೆ ಒತ್ತು ನೀಡುತ್ತಿದ್ದು, ಜಿಲ್ಲೆಯಲ್ಲಿ ಶೇ.65ರಷ್ಟು ಗ್ರಾಹಕರು ವಿವಿಧ ಆ್ಯಪ್‌ಗಳ ಮೂಲಕ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ. ಪಾವತಿ ಮತ್ತು ರಶೀದಿ ಸಹಿತ ವಿವಿಧ ಸೇವೆಗಳು ಒಂದೇ ಕಡೆ ದೊರಕಿಸುವ ನಿಟ್ಟಿನಲ್ಲಿ ಈ ಆ್ಯಪ್ ಪ್ರಯೋಜನಕಾರಿ. ಆ್ಯಂಡ್ರಾಯ್ಡಾ ಹಾಗೂ ಐಒಎಸ್‌ನಲ್ಲಿ ಆ್ಯಪ್ ಲಭ್ಯವಿದ್ದು, ಆ್ಯಪ್‌ನಲ್ಲಿ ಮೊದಲು ಮೊಬೈಲ್ ಸಂಖ್ಯೆ ನೋಂದಾಯಿಸಿ ಅದಕ್ಕೆ ಒಟಿಪಿ ದಾಖಲಿಸಬೇಕು. ಗ್ರಾಮೀಣ ಮತ್ತು ನಗರ ಖಾತೆ ಆಯ್ಕೆ ಇರಲಿದೆ. ಖಾತೆಯ ಹೆಸರು, ಮೆಸ್ಕಾಂ ಲೊಕೇಶನ್ ಕೋಡ್ ಹಾಗೂ ಆರ್‌ಆರ್ ನಂಬರ್ ನಮೂದಿಸಿದ ಕೂಡಲೇ ಖಾತೆ ಸಂಬಂಧಿತ ವೈಯಕ್ತಿಕ ವಿವರ, ಹಿಂದಿನ ಪಾವತಿಯ ವಿವರ ಲಭ್ಯವಾಗುತ್ತದೆ. ಇಲ್ಲಿ 10 ಅಕೌಂಟ್‌ಗಳನ್ನು ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸುಲಭ ಬಿಲ್ ಪಾವತಿ: ಮಾಸಿಕ ವಿದ್ಯುತ್ ಬಿಲ್ ಅನ್ನು ಡೆಬಿಟ್, ಕ್ರೆಡಿಟ್, ಚಿಪ್‌ಕಾರ್ಡ್, ನೆಟ್ ಬ್ಯಾಂಕ್, ಕ್ಯಾಶ್ ಕಾರ್ಡ್, ಕ್ಯೂಆರ್, ಯುಪಿಐ ಮೂಲಕ ಪಾವತಿಸಬಹುದು. ಹಣ ಜಮೆಯಾದ ಬಗ್ಗೆ ವಿದ್ಯುನ್ಮಾನ ರಶೀದಿ ಲಭ್ಯವಾಗುತ್ತದೆ. ಆ್ಯಪ್ ಮೂಲಕ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಗೂ ಅವಕಾಶವಿದೆ.

ಆನ್‌ಲೈನ್ ಪಾವತಿ ಹೆಚ್ಚಿಸುವ ನಿಟ್ಟಿನಲ್ಲಿ ‘ನನ್ನ ಮೆಸ್ಕಾಂ’ ಆ್ಯಪ್ ಬಿಡುಗಡೆ ಮಾಡಲಾಗಿದೆ. 10 ಸಾವಿರ ಗ್ರಾಹಕರು ಬಳಸುತ್ತಿದ್ದಾರೆ. ನಗರ ಪ್ರದೇಶದ ಶೇ.15ರಷ್ಟು ಗ್ರಾಹಕರು ಆ್ಯಪ್‌ಗೆ ಲಾಗಿನ್ ಆಗಿದ್ದಾರೆ. ಬಿಲ್ ಪಾವತಿಗೆ ಸಂಬಂಧಿಸಿದ ಎಲ್ಲ ವಿವರಗಳೂ ಒಂದೇ ಕಡೆ ಲಭ್ಯವಾಗಲಿವೆ. |ನರಸಿಂಹ ಪಂಡಿತ್, ಮೆಸ್ಕಾಂ ಅಧೀಕ್ಷಕ, ಉಡುಪಿ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net