ಹಿರೀಸಾವೆ ವ್ಯಾಪ್ತಿಯಲ್ಲಿ ಉತ್ತಮ ಮಳೆ

02 HRS 03
Published on

ಹಿರೀಸಾವೆ : ಹೋಬಳಿಯಾದ್ಯಂತ ಬುಧವಾರ ಮತ್ತು ಗುರುವಾರ ಹಿರೀಸಾವೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.


ಬೆಳಗ್ಗೆಯಿಂದಲೇ ಬಿಸಿಲಿನ ಜತೆಗೆ ಮಳೆಯ ಕಾವು ಹೆಚ್ಚಾಗಿದ್ದು ಮಧ್ಯಾಹ್ನ 3.30 ರಲ್ಲಿ ಪ್ರಾರಂಭಗೊಂಡು ವ್ಯಾಪಕವಾಗಿ ಸುರಿಯಿತು. ಗುಡುಗು ಹೊರತು ಪಡಿಸಿದರೆ ಗಾಳಿ ಇರಲಿಲ್ಲ. ಆದ್ದರಿಂದ ಒಂದೇ ಸಮನೆ ಸಂಜೆಯಾದರೂ ಸುರಿಯುತ್ತಲೇ ಇತ್ತು.


ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಳೆ ಪ್ರಾರಂಭಗೊಂಡು ಹೋಬಳಿಯ ಅಲ್ಲಲ್ಲಿ ಸುರಿದಿತ್ತು. ಆದರೆ ಬುಧವಾರ ಪ್ರಾರಂಭಗೊಂಡ ಮಳೆ ಹೋಬಳಿ ವ್ಯಾಪ್ತಿಯನ್ನು ಸಂಪೂರ್ಣ ಆವರಿಸಿಕೊಂಡು ಎಡಬಿಡದಂತೆ ಗಂಟೆಗಟ್ಟಲೆ ಸುರಿಯಿತು.


ಹೋಬಳಿಯಾದ್ಯಂತ ಗುರುವಾರ ಸಹ ಮಳೆ ಸುರಿಯಿತು. ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನ 2 ಗಂಟೆಯಿಂದ 3.30 ರವರೆಗೆ ಜೋರಾಗಿ ಮಳೆ ಸುರಿಯಿತು. ನಂತರ ಜಡಿಮಳೆ ಮುಂದುವರಿಯಿತು. ರಾಗಿ, ಮುಸುಕಿನ ಜೋಳ ಹಾಗೂ ಇನ್ನಿತರ ಬೆಳೆಗಳು ಸದ್ಯ ಚೇತರಿಸಿಕೊಳ್ಳಲು ಅನುಕೂಲವಾಗಿದೆ.


ತೇವಾಂಶದ ಕೊರತೆ ಪರಿಣಾಮ ತೆಂಗಿನ ಮರಗಳು ಬಾಡಲಾರಂಭಿಸಿದ್ದವು. ಇನ್ನು ವಾಡಿಕೆಯಂತೆ ಮಳೆಯಾಗದ ಕಾರಣ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕುಸಿತ ಕಂಡಿದ್ದು ಯಾವುದೇ ಬೆಳೆಗಳಿಗೆ ನೀರಾಯಿಸುವ ಸಾಧ್ಯವಾಗದೆ ಬೆಳೆಗಳನ್ನು ಕೈ ಬಿಡಲಾಗಿತ್ತು. ಸದ್ಯ ಮಳೆಯಾಗಿದ್ದು ರೈತರಲ್ಲಿ ಸಂತಸ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net