ಹಿರೀಸಾವೆ ಹೋಬಳಿಯಾದ್ಯಂತ ಉತ್ತಮ ಮಳೆ

18 HRS 01
ಹಿರೀಸಾವೆ ಹೋಬಳಿ ದಿಡಗ ವ್ಯಾಪ್ತಿ ಶುಕ್ರವಾರ ಸಂಜೆ ಧಾರಾಕಾರವಾಗಿ ಮಳೆ ಸುರಿಯಿತು.
Published on

ಹಿರೀಸಾವೆ: ಹೋಬಳಿಯಾದ್ಯಂತ ಶುಕ್ರವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ.

ಕಳೆದ ಬುಧವಾರ ಹೋಬಳಿಯ ಅಲ್ಲಲ್ಲಿ ಕೆಲವೆಡೆ ತಕ್ಕಮಟ್ಟಿಗೆ ಮಳೆಯಾಗಿತ್ತು. ಆದರೆ ಶುಕ್ರವಾರ ಸಂಜೆ 4.45ರಲ್ಲಿ ಪ್ರಾರಂಭಗೊಂಡ ಮಳೆ ಹೋಬಳಿ ವ್ಯಾಪ್ತಿಯನ್ನು ಆವರಿಸಿಕೊಂಡು ರಾತ್ರಿ 9 ಗಂಟೆವರೆಗೂ ಧಾರಾಕಾರವಾಗಿ ಸುರಿಯಿತು. ನಂತರವೂ ಸೋನೆ ಮಳೆ ಮುಂದುವರಿಯಿತು.

ಕಳೆದ 3-4 ತಿಂಗಳಿಂದ ಬೇಸಿಗೆಯ ಬಿಸಿಲಿನ ತಾಪದಿಂದ ಬೇಸತ್ತಿದ್ದ ಜನತೆಗೆ ಮಳೆಯಾಗಿದ್ದು ತಂಪು ಎರೆದಂತಾಯಿತು. ಚರಂಡಿಗಳು ತುಂಬಿ ರಸ್ತೆಗಳ ಮೇಲೆಲ್ಲ ಮಳೆನೀರು ಧಾರಾಕಾರವಾಗಿ ಹರಿಯಿತು. ತೋಟ ಹಾಗೂ ಕೃಷಿ ಜಮೀನಿನಲ್ಲಿ ನೀರು ತುಂಬಿರುವುದನ್ನು ಕಂಡು ರೈತರು ಸಂತಸ ವ್ಯಕ್ತಪಡಿಸಿದರು.

ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ಜಮೀನುಗಳು ಹದಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಲು ಇನ್ನೂ 5-6 ದಿನಗಳು ಬೇಕಾಗಲಿದೆ. ಸದ್ಯಕ್ಕೆ ರೈತರು, ಕೃಷಿ ಜಮೀನಿನ ಬದುಗಳಲ್ಲಿ ಬೆಳೆದಿರುವ ಮುಳ್ಳಿನ ಹಾಗೂ ಇತರ ಗಿಡಗಂಟಿಗಳನ್ನು ತೆರವುಗೊಳಿಸುವುದರ ಜತೆಗೆ ತೋಟದಲ್ಲಿ ಹರಡಿಕೊಂಡಿರುವ ತೆಂಗಿನ ಗರಿಗಳನ್ನು ಒಂದೆಡೆ ಹಾಕಿ ಬೆಂಕಿ ಹೊತ್ತಿಸಿ ಸುಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಹೆಚ್ಚು ಫಸಲು ತೆಗೆಯುವ ಸಲುವಾಗಿ ಕೆರೆಯಿಂದ ಫಲವತ್ತಾದ ಮಣ್ಣನ್ನು ಟ್ರ್ಯಾಕ್ಟರ್‌ಗಳ ಮೂಲಕ ಜಮೀನುಗಳಿಗೆ ಏರಿಸಿರುವ ರೈತರು ಆ ಮಣ್ಣಿನ ಗುಡ್ಡೆಗಳನ್ನು ಲೆವೆಲರ್ ಯಂತ್ರದ ಮೂಲಕ ಸಮತಟ್ಟು ಮಾಡುತ್ತಿದ್ದಾರೆ. ಇನ್ನು ಕೊಟ್ಟಿಗೆ ಗೊಬ್ಬರ ಸುರಿಸಿರುವವರು ಗುಡ್ಡೆಗಳನ್ನು ಚೆಲ್ಲುವಲ್ಲಿ ಮಗ್ನರಾಗಿದ್ದಾರೆ.

ಒಣ ಹಾಗೂ ಹಸಿ ಮೇವಿನ ಸಮಸ್ಯೆ ತಲೆದೂರಿರುವ ಪರಿಣಾಮ ರೈತರು ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತುವುದರ ಬದಲು ಹೈನುಗಾರಿಕೆಗೆ ಅನುಕೂಲವಾಗುವಂತೆ ಸದ್ಯ ಮುಸುಕಿನ ಜೋಳ ಹಾಗೂ ಇತರ ಮೇವಿನ ಬೆಳೆಗಳನ್ನು ಬಿತ್ತನೆಗೊಳಿಸಲು ಮುಂದಾಗಿದ್ದಾರೆ.

ಮಳೆ ನೀರು ಕೆರೆ-ಕಟ್ಟೆಗಳಿಗೆ ಹರಿದು ಅಲ್ಲಲ್ಲಿ ಗುಂಡಿಗಳಲ್ಲಿ ಸಂಗ್ರಹಗೊಂಡಿತಾದರೂ ಬೇಸಿಗೆಯ ಬಿಸಿಲಿನ ತಾಪದಿಂದ ಕೆರೆಯಂಗಳ ಬಿರುಕು ಬಿಟ್ಟಿದ್ದರಿಂದ ಮಳೆನೀರು ಹೆಚ್ಚು ಸಮಯ ನಿಲ್ಲದೆ ಇಂಗಿ ಹೋಗುತ್ತಿದೆ. ಮಳೆಯ ಪರಿಣಾಮ ತೆಂಗು ಹಾಗೂ ಇತರ ಮರ-ಗಿಡಗಳು ಧರೆಗುರುಳಿವೆ. ಮಳೆಯಿಂದ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net