ಬೇಸಿಗೆಯಲ್ಲೂ ರಾಜಧಾನಿಯಲ್ಲಿ ಉತ್ತಮ ಮಳೆ: ನಾಳೆ ಹಲವೆಡೆ ವರ್ಷಧಾರೆ ಸಾಧ್ಯತೆ

rain start
Published on

ಬೆಂಗಳೂರು: ರಾಜಧಾನಿಯಲ್ಲಿ ಬೇಸಿಗೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದೆ. ಮಾ.1ರಿಂದ ಏ.20ರವರೆಗೆ 35 ಮಿಮೀ ವರ್ಷಧಾರೆಯಾಗಬೇಕಿತ್ತು. 56 ಮಿಮೀಯಾಗಿದ್ದು, ವಾಡಿಕೆಗಿಂತ ಶೇ.59 ಅಧಿಕವಾಗಿ ಪೂರ್ವ ಮುಂಗಾರು ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜಧಾನಿಯ ಹಲವೆಡೆ ಭಾನುವಾರವೂ ಸಾಧಾರಣ ಮಳೆಯಾಗಿತ್ತು. ನಗರದ ಇತರ ಪ್ರದೇಶಗಳಗಿಂತ ಜಕ್ಕೂರು- 12, ಚೌಡೇಶ್ವರಿ- 11, ಹಂಪೆನಗರ-11, ವಿದ್ಯಾರಣ್ಯಪುರ-10, ವನ್ನರ್​ಪೇಟೆಯಲ್ಲಿ 10 ಮಿಮೀ ಮಳೆಯಾಯಿತು.

ಬೆಳಗ್ಗೆ ಬಿಸಿಲು ವಾತಾವರಣ ಕಾಣಿಸಿಕೊಂಡರೆ, ಮಧ್ಯಾಹ್ನ ವೇಳೆ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆ ಅರ್ಧ ಗಂಟೆ ಕೆಲವೆಡೆ ಜೋರಾಗಿ ಸುರಿದರೆ, ಇನ್ನೂ ಕೆಲ ಬಡಾವಣೆಗಳಲ್ಲಿ ಸಾಧಾರಣವಾಗಿ ಬಿತ್ತು.

ವಿ. ನಾಗೇನಹಳ್ಳಿ, ಹೊರಮಾವು, ಗುರುಡಾಚಾರ್​ಪಾಳ್ಯ, ಬಿಳೇಕಹಳ್ಳಿ, ರಾಮಮೂರ್ತಿನಗರ, ಕಾಡುಗುಡಿ, ಬಿಟಿಎಂ ಲೇಔಟ್​, ಹೂಡಿ, ಬಸವನಪುರ, ಕೆ.ಆರ್​.ಪುರ, ಚಾಮರಾಜಪೇಟೆ, ಕೃಷ್ಣ ರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್​ ನಿಲ್ದಾಣ, ದೊಡ್ಡನೆಕ್ಕುಂಡಿ ಮುಂತಾದೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಯಿತು. ನಗರದ ಪ್ರಮುಖ ಜಂಕ್ಷನ್​, ಅಂಡರ್​ಪಾಸ್​ಗಳಲ್ಲಿ ತುಸು ನೀರು ನಿಂತಿತ್ತು. ಇದರ ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ವಾಹನಸವಾರರು ಮಳೆಯಲ್ಲಿ ನೆನೆದುಕೊಂಡು ತೆರಳುತ್ತಿದ್ದರು.ಕೆಲ ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.

ವಾಡಿಕೆಯಂತೆ ಉಷ್ಣಾಂಶ: ನಗರದಲ್ಲಿ ಮಳೆ ಸುರಿದ ಪರಿಣಾಮ ಗರಿಷ್ಠ, ಕನಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ ದಾಖಲಾಗಿದೆ. ವಾತಾವರಣದಲ್ಲಿ ತುಸು ತಂಪಾಗಿದೆ. ಸಿಲಿಕಾನ್​ ಸಿಟಿಯ ಆಯ್ದ ಬಡಾವಣೆಗಳಲ್ಲಿ ಏ.21ರಂದು ತುಸು ಬಿರುಸಾಗಿ ಮಳೆಯಾಗಲಿದೆ. ಏ.22ರಿಂದ ಏ.25ರವರೆಗೆ ಒಣ ಹವೆ ಇರಲಿದೆ. ಏ.26ರಿಂದ ಮುಂದಿನ 2 ದಿನ ಬಿರುಗಾಳಿ ಸಹಿತ ವರ್ಷಧಾರೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33 ಮತ್ತು 22 ಡಿ.ಸೆ. ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net