

ಮುಂಡಗೋಡ: ತಾಲೂಕಿನಾದ್ಯಂತ ಶನಿವಾರ ಉತ್ತಮ ಮಳೆಯಾಗಿದೆ.
ಸಿಡಿಲು ಬಡಿದ ಪರಿಣಾಮ ಪಟ್ಟಣದ ಎರಡು ಕಡೆ ತೆಂಗಿನಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಾಲೂಕಾದ್ಯಂತ ಅರ್ಧ ಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು. ಮಳೆ ಗಾಳಿಗೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಬಿರುಗಾಳಿಗೆ ಕೆಲವೆಡೆ ಮನೆಯ ಹೆಂಚುಗಳು ಹಾಗೂ ತಗಡುಗಳು ಹಾರಿ ಹೋಗಿವೆ. ತಾಲೂಕಿನ ಹಿರಳ್ಳಿ ಗ್ರಾಮದ ಸನಿಹ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮಾವಿನಮರವೊಂದು ರಸ್ತೆ ಮೇಲೆ ಅಡ್ಡಲಾಗಿ ಬಿದ್ದ ಪರಿಣಾಮ ಎರಡು ತಾಸಿಗೂ ಅಧಿಕ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ನೆಲಕಚ್ಚಿದ ಮಾವು: ಕೆಲ ಭಾಗದಲ್ಲಿ ಜೋರಾದ ಬಿರುಗಾಳಿ ಬೀಸಿದ ಪರಿಣಾಮ ಅಪಾರ ಪ್ರಮಾಣದ ಮಾವಿನ ಕಾಯಿಗಳು ನೆಲಕಚ್ಚಿವೆ. ಇದರಿಂದ ಮಾವು ಬೆಳೆಗಾರರು ಹಾನಿ ಅನುಭವಿಸುವಂತಾಗಿದೆ.