ಚಾಮರಾಜನಗರ: ಹನೂರು ತಾಲೂಕಿನಲ್ಲಿ ವಾರದಿಂದ ಆಗಾಗ್ಗೆ ಉತ್ತಮ ಮಳೆಯಾಗುತ್ತಿರುವುದರಿಂದ ಮಲೆಮಹದೇಶ್ವರ, ಕಾವೇರಿ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಣಗಿ ನಿಂತಿದ್ದ ಮರಗಳು ಚಿಗುರೊಡೆಯುತ್ತಿದ್ದು, ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ.
ಜಿಲ್ಲೆಯಲ್ಲಿಯೇ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ತಾಲೂಕಿನ ಈ 3 ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳು, ಪ್ರಾಣಿ-ಪಕ್ಷಿಗಳು, ಗಿಡ ಮೂಲಿಕೆಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮರಗಿಡಗಳಿವೆ. ಬೇಸಿಗೆ ಬಂತೆಂದರೆ ಈವೆರಗೂ ಕಾಡುಪ್ರಾಣಿಗಳಿಗೆ ಕೊಂಚ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಕೆಲವೆಡೆ ಗಿಡಮರಗಳು ಒಣಗುತ್ತಿದ್ದವು. ಈ ವರ್ಷ ಮಳೆಯಾಗದ ಹಿನ್ನೆಲೆ ಜತೆಗೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಅರಣ್ಯ ಪ್ರದೇಶದಲ್ಲಿನ ಬಹುತೇಕ ಕೆರೆ-ಕಟ್ಟೆಗಳು ಹಾಗೂ ಹಳ್ಳ-ಕೊಳ್ಳಗಳು ಬತ್ತಿದ್ದವು. ಇದರಿಂದ ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ನೀರಿಗಾಗಿ ಪ್ರಾಣಿಗಳು ಗ್ರಾಮ ಹಾಗೂ ಜಮೀನಿನತ್ತ ಬರುತ್ತಿದ್ದವು. ಈ ದೆಸೆಯಲ್ಲಿ ಅರಣ್ಯ ಇಲಾಖೆ ಕೆರೆ-ಕಟ್ಟೆಗಳಿಗೆ ಸೋಲಾರ್ ಬೋರ್ ಹಾಗೂ ಡಿಸೇಲ್ ಮೋಟಾರ್ ಮೂಲಕ ನೀರನ್ನು ಒದಗಿಸುತ್ತಿತ್ತು.
ಇನ್ನು ಅಂತರ್ಜಲ ಮಟ್ಟ ಕುಸಿತದಿಂದ ಬಹುತೇಕ ಅರಣ್ಯ ಪ್ರದೇಶದಲ್ಲಿ ಮರಗಿಡಗಳು, ಕುರುಚಲು ಸಸ್ಯಗಳು ಸಂಪೂರ್ಣ ಒಣಗಿದ್ದವು. ಕಳೆದ ತಿಂಗಳ ಹಿಂದೆ ಗೋಪಿನಾಥಂ, ಬೈಲೂರು ಹಾಗೂ ಇನ್ನಿತರ ಅರಣ್ಯ ಪ್ರದೇಶದಲ್ಲಿ ನೂರಾರು ಎಕರೆ ಬೆಂಕಿಗೆ ಆಹುತಿಯಾಗಿತ್ತು. ಹಾಗಾಗಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದೇ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಲೆನೋವಾಗಿತ್ತು.
ಸದ್ಯ ಕಳೆದ ವಾರದಿಂದ ಅರಣ್ಯ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಇತ್ತ ಹಳ್ಳಕೊಳ್ಳಗಳಲ್ಲೂ ನೀರು ಹರಿಯುತ್ತಿದೆ. ಇದರಿಂದ ವನ್ಯಜೀವಿಗಳಿಗೆ ತಲೆದೂರಿದ್ದ ಕುಡಿಯುವ ನೀರಿನ ಸಮಸ್ಯೆ ಕೊಂಚ ನೀಗಿದಂತಿದೆ. ಇತ್ತ ಸಂಪೂರ್ಣ ಒಣಗಿ ನಿಂತಿದ್ದ ಮರಗಳು ಚಿಗುರೊಡೆಯಲು ಆರಂಭಿಸಿದೆ. ಇದರಿಂದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊಂಚ ನಿಟ್ಟಿಸಿರುಬಿಡುವಂತಾಗಿದೆ.