ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

rain
Published on

ಮಡಿಕೇರಿ: ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ.


ಮಡಿಕೇರಿ ತಾಲೂಕಿನ ಗಾಳಿಬೀಡು, ಉಡೋತ್‌ಮೊಟ್ಟೆ, ತಾಳತ್ತಮನೆ, ಬೆಟ್ಟಗೇರಿ, ಬೋಯಿಕೇರಿ, ಮದೆನಾಡು, ಸಂಪಾಜೆ ಹಾಗೂ ಮಡಿಕೇರಿ ನಗರದ ಸುತ್ತಮುತ್ತ ಶನಿವಾರ ರಾತ್ರಿ ಗಾಳಿ ಮಿಶ್ರಿತ ಉತ್ತಮ ಮಳೆಯಾಗಿದೆ. ಭಾನುವಾರ ಅಲ್ಲಿಲ್ಲಿ ಸಾಧಾರಣ ಮಳೆಯಾಗಿದೆ. ಪರಿಣಾಮ ನಗರದಲ್ಲಿ ಬೀದಿಬದಿ ವ್ಯಾಪಾರಿಗಳು, ಶಾಲಾ ಮಕ್ಕಳು, ದ್ವಿಚಕ್ರ ಸವಾರರು ಮಳೆಯಲ್ಲಿ ಪರದಾಡಿದರು.


ಮಳೆಯಿಂದಾಗಿ ಮಡಿಕೇರಿ ತಾಲೂಕು ಸಂಪಾಜೆ ಹೋಬಳಿಯ ಮೇಕೇರಿ ಗ್ರಾಮದ ನಿವಾಸಿ ಆಯಿಷಾ ಎಂಬುವರ ಮನೆಯ ಗೋಡೆ ಕುಸಿದಿದೆ. ಉಳಿದ ಭಾಗ ಬಿರುಕು ಬಿಟ್ಟಿದ್ದು, ಸದ್ಯದ ಮಟ್ಟಿಗೆ ಕುಟುಂಬದವರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಶನಿವಾರ ಸಂಜೆ ಸುರಿದ ಮಳೆಯಿಂದ ಅತ್ತೂರು ಗ್ರಾಮದ ನಿವಾಸಿ ಜರ್ನಾದನಾರವರ ವಾಸದ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಹಾನಿಯಾಗಿದೆ. ಕುಶಾಲನಗರ ತಾಲೂಕಿನ ತಹಸೀಲ್ದಾರ್‌ರವರು ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಶನಿವಾರಸಂತೆ ಹೋಬಳಿಯ ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಚನ್ನಾಪುರ ಗ್ರಾಮದ ಲಕ್ಷ್ಮಿ ಎಂಬುವರ ವಾಸದ ಮನೆ ರಾತ್ರಿ ಸುರಿದ ಮಳೆಯಿಂದ ಭಾಗಶಃ ಹಾನಿಯಾಗಿದೆ.


ಕಳೆದ೨೪ ಗಂಟೆಯಲ್ಲಿ ೪೯.೩೧ ಮಿ.ಮೀ. ಮಳೆ: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೬.೨೩ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೫೬.೨೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೩೯.೭ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೫೩.೮೨ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೭೫.೩ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೨೧.೫ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೪೩.೬, ನಾಪೋಕ್ಲು ೭೯.೨, ಸಂಪಾಜೆ ೪೭, ಭಾಗಮಂಡಲ ೫೫.೨, ವಿರಾಜಪೇಟೆ ೪೩.೪, ಅಮ್ಮತ್ತಿ ೩೬, ಸೋಮವಾರಪೇಟೆ ಕಸಬಾ ೭೨.೨, ಶನಿವಾರಸಂತೆ ೬೪, ಶಾಂತಳ್ಳಿ ೧೩೦, ಕೊಡ್ಲಿಪೇಟೆ ೩೫, ಕುಶಾಲನಗರ ೧೨, ಸುಂಟಿಕೊಪ್ಪ ೩೧, ಪೊನ್ನಂಪೇಟೆ ೨೪, ಹುದಿಕೇರಿ ೪೬.೨, ಶ್ರೀಮಂಗಲ ೧೦ಗ ಬಾಳಲೆ ೪೦.೦೮ ಮಿ.ಮೀ.ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net