ಕರಾವಳಿಯಲ್ಲಿ ಮಳೆ ಜೋರು, ಜಲಾಶಯಕ್ಕೆ ಹರಿಯುತ್ತಿಲ್ಲ ನೀರು

Rainfall-in-Karwar
Published on

ಕಾರವಾರ: ಜಿಲ್ಲೆಯ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಮಾನ್ಸೂನ್ ಮಾರುತಗಳು ಘಟ್ಟ ಹತ್ತುತ್ತಿಲ್ಲ. ಇದರಿಂದ ನದಿಗಳು ಉಕ್ಕುತ್ತಿಲ್ಲ. ಅಣೆಕಟ್ಟೆಗಳಿಗೆ ನೀರಿನ ಹರಿವಿಲ್ಲ. ರೈತನಿಗೆ ಕೃಷಿ ಕಾರ್ಯ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ.

ಜಿಲ್ಲೆಯ ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಚುರುಕುಗೊಂಡಿದೆ. ಕಳೆದ ಒಂದು ವಾರದಲ್ಲಿ ಕರಾವಳಿ ತಾಲೂಕುಗಳಲ್ಲಿ ತಲಾ 350 ರಿಂದ 650 ಮಿಮೀವರೆಗೂ ಮಳೆಯಾಗಿದೆ.

ಕಾರವಾರ, ಭಟ್ಕಳ, ಹೊನ್ನಾವರದಲ್ಲಿ ನೆರೆಯ ಪ್ರತಾಪವೂ ಕಂಡುಬಿಟ್ಟಿದೆ. ಆದರೆ, ಘಟ್ಟದ ಮೇಲಿನ ತಾಲೂಕುಗಳಲ್ಲಿ ದಿನಕ್ಕೆ ಆಗೊಮ್ಮೆ, ಈಗೊಮ್ಮೆ ಮಳೆ ಬಂದು ಮಾಯವಾಗುತ್ತಿದೆ. ಅಲ್ಲಿ ಒಂದು ವಾರದ ಒಟ್ಟು ಮಳೆಯ ಪ್ರಮಾಣ ತಲಾ 150 ಮಿಮೀ ದಾಟಿಲ್ಲ.
ಉಕ್ಕುತ್ತಿಲ್ಲ ನದಿಗಳು:
ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಘಟ್ಟ ಇಳಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ಮುಂತಾದ ನದಿಗಳು ಪ್ರತಿ ವರ್ಷ ಮಳೆಗಾಲ ಬಂತೆಂದರೆ ಕೆಂಪೆರುತ್ತಿದ್ದವು, ಉಕ್ಕಿ ಹರಿಯುತ್ತಿದ್ದವು. ಎಲ್ಲವಕ್ಕೂ ಘಟ್ಟದ ಮೇಲಿನ ಮಳೆಗಳೇ ನೀರಿನ ಮೂಲಗಳು.

ಈ ವರ್ಷ ಇನ್ನೂ ನದಿಗಳು ತುಂಬಿ ಹರಿಯುತ್ತಿಲ್ಲ. ಇದರಿಂದ ಅಣೆಕಟ್ಟೆಗಳಿಗೂ ನೀರಿನ ಒಳ ಹರಿವಿಲ್ಲ. ಅಬ್ಬರದ ಮಳೆಯ ಜುಲೈ ತಿಂಗಳು ಹತ್ತಿರವಾದರೂ ಜಿಲ್ಲೆಯ ಪ್ರಮುಖ ಜಲಾಶಯಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಗುರುವಾರದ ವರದಿಯಂತೆ ಸೂಪಾಕ್ಕೆ 1799 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ. ಕದ್ರಾ ಜಲಾಶಯಕ್ಕೆ 3767, ಕೊಡಸಳ್ಳಿಗೆ 2621 ಕ್ಯೂಸೆಕ್, ಗೇರುಸೊಪ್ಪ ಜಲಾಶಯಕ್ಕೆ 1566 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ. ಪ್ರತಿ ವರ್ಷ ಈ ಅವಽಯಲ್ಲಿ ಪ್ರತಿ ಜಲಾಶಯಕ್ಕೆ ಕನಿಷ್ಠ 5 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು.
ರೈತರಲ್ಲಿ ಆತಂಕ:
ಇದುವರೆಗೂ ಸಮರ್ಪಕ ಮಳೆಯಾಗದ ಕಾರಣ ರೈತರು ಆತಂಕದಲ್ಲಿದ್ದಾರೆ. ಆಗಲೇ ಜೂನ್ ತಿಂಗಳು ಕಳೆಯುತ್ತಿದ್ದು, ಇನ್ನೂ ಉಳುಮೆ ಪ್ರಾರಂಭಿಸಲು ಗದ್ದೆಗಳಿಗೆ ನೀರಾಗಿಲ್ಲ. ಬೀಜ, ಗೊಬ್ಬರ ಸಿದ್ಧ ಮಾಡಿ ಇಟ್ಟವರಿಗೆ ಸಸಿ ಮಡಿ ಮಾಡಲು, ಬಿತ್ತನೆ ಮಾಡಲು ಮೇಲೆ ನೋಡುವಂತಾಗಿದೆ.

ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಜಲಾಶಯ ಗರಿಷ್ಠ ಮಟ್ಟ ಇಂದಿನ ಮಟ್ಟ
(ಮೀ.ಗಳಲ್ಲಿ) (ಮೀಗಳಲ್ಲಿ)

  • ಕದ್ರಾ 34.50 30.03
  • ಕೊಡಸಳ್ಳಿ 75.50 68.80
  • ಸೂಪಾ 564.00 525.99
  • ಗೇರುಸೊಪ್ಪ 55.00 47.79

ಮಳೆಯ ಕೊರತೆ

ಕಳೆದೊಂದು ವಾರದಿಂದ ಕರಾವಳಿಯಲ್ಲಿ ಮಳೆಯಾಗುತ್ತಿದ್ದರೂ ಜೂನ್ ತಿಂಗಳ ವಾಡಿಕೆಯ ಮಳೆಯ ಪ್ರಮಾಣವನ್ನು ಮೀರಿಸಿಲ್ಲ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯಂತೆ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಸರಾಸರಿ 656 ಮಿಮೀ ಮಳೆಯಾಗಬೇಕಿತ್ತು. ಕೇವಲ 283 ಮಿಮೀ ಮಳೆಯಾಗಿದ್ದು, ಶೇ.57 ರಷ್ಟು ಮಳೆ ಕೊರತೆಯಾಗಿದೆ. ಅಂಕೋಲಾ-ಶೇ.45, ಭಟ್ಕಳ-ಶೇ.40, ಹಳಿಯಾಳ-ಶೇ.80, ಹೊನ್ನಾವರ-ಶೇ.34, ಕಾರವಾರ -ಶೇ.39, ಮುಂಡಗೊಡ-ಶೇ.75, ಸಿದ್ದಾಪುರ-ಶೇ.65, ಶಿರಸಿ-ಶೇ.76, ಜೊಯಿಡಾ-ಶೇ.60, ಯಲ್ಲಾಪುರ-ಶೇ.76, ದಾಂಡೇಲಿ-ಶೇ.80 ಮಳೆಯ ಕೊರತೆ ಉಂಟಾಗಿದೆ.

ಮಳೆಯ ಪ್ರಮಾಣ
ಗುರುವಾರ ಬೆಳಗಿನ ವರದಿಯಂತೆ ಅಂಕೋಲಾ-48 ಮಿಮೀ, ಭಟ್ಕಳ-31, ದಾಂಡೇಲಿ-3.4, ಹಳಿಯಾಳ-1.4, ಹೊನ್ನಾವರ-37, ಜೊಯಿಡಾ-10.8, ಕಾರವಾರ-45.7, ಕುಮಟಾ-36.8, ಮುಂಡಗೋಡ-2.2, ಸಿದ್ದಾಪುರ-11.4, ಶಿರಸಿ-9.5, ಯಲ್ಲಾಪುರ-7.6 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net