

ಜಯಪುರ: ದೈವತ್ವಕಿಂತ ಮನುಷ್ಯತ್ವಕ್ಕೆ ಹೆಚ್ಚು ಬೆಲೆಯಿದೆ. ಬುದ್ಧಿಯಿಂದ ಮನುಷ್ಯರನ್ನು ಅಳೆಯುವ ಬದಲು ಹೃದಯದಿಂದ ಅಳೆಯಿರಿ ಎಂದು ಗೌರಿಗದ್ದೆ ದತ್ತಾವಧೂತ ವಿನಯ ಗುರೂಜಿ ಹೇಳಿದರು.
ಪಟ್ಟಣದಲ್ಲ್ಲಿ ಶುಕ್ರವಾರ ಶ್ರೀ ವೃದ್ಧಿ ಎನರ್ಜೀಸ್ ಅವರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜನರನ್ನು ಬುದ್ಧಿಯಿಂದ ಅಳೆಯಲು ಹೋದಾಗ ಅವರಲ್ಲಿ ನಕರಾತ್ಮಕ ಅಂಶಗಳೇ ಜಾಸ್ತಿ ಕಾಣುತ್ತವೆ. ಆದರೆ ಹೃದಯದಿಂದ ಕರುಣೆ, ಪ್ರೀತಿಯಿಂದ ನೋಡಿದರೆ ಅವರೆಲ್ಲರೂ ನಮ್ಮವರಾಗಿ ಕಾಣುತ್ತಾರೆ. ನಮ್ಮ ಕೆಲಸವನ್ನು ಪ್ರೀತಿಯಿಂದ, ಪ್ರಾಮಾಣಿಕತೆಯಿಂದ ಮಾಡಿದರೆ ಅದು ಪೂಜೆ ಮಾಡಿದಂತೆ ಎಂದರು.
ಯುವಜನರು ಊರಿಗಾಗಿ ಶಾಲೆಗಳನ್ನು ಮುನ್ನಡೆಸಬೇಕು. ಜನರಿಗಾಗಿ ಆಸ್ಪತ್ರೆ ತೆರೆಯಬೇಕು. ಸಹೋದರ, ಸಹೋದರಿಯರಿಗಾಗಿ ಹೊಸ ಉದ್ಯಮಗಳನ್ನು ತೆರೆದು ಉದ್ಯೋಗ ನೀಡಬೇಕು ಮತ್ತು ಜನರು ಅಂಥವರಿಗೆ ಸಹಕಾರ ನೀಡಬೇಕು. ಹಾಗಾದಾಗ ನಾವು ಬೆಳೆಯುವ ಜತೆಗೆ ನಮ್ಮವರನ್ನೂ ಬೆಳೆಸಿದಂತಾಗುತ್ತದೆ. ಜನರು ಶ್ರೀ ವೃದ್ಧಿ ಎನರ್ಜೀಸ್‌ನಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಯಪುರ ಬೆಳೆಯುತ್ತಿದ್ದು, ಪಟ್ಟಣದ ರಸ್ತೆ ಇಕ್ಕಟ್ಟಿನಿಂದ ಕೂಡಿದೆ. ರಸ್ತೆ ವಿಸ್ತರಣೆಗೆ ಸಮಾಲೋಚನೆ ನಡೆಸಲಾಗಿದೆ. ಜನರು ಸಹಕರಿಸಿದರೆವಿಸ್ತರಿಸುವುದಾಗಿ ತಿಳಿಸಿದರು.
ಜಯಪುರ ಚರ್ಚ್ ಧರ್ಮಗುರು ಫೆಲಿಕ್ಸ್ ಥೋಮಸ್ ರೊಸಾರಿಯೊ, ವ್ಯವಸ್ಥಾಪಕರಾದ ಸಚಿನ್, ಪಾಂಡುರಂಗ ಸಾಲಿಯಾನ, ಮುಖಂಡರಾದ ಕುಕ್ಕುಡಿಗೆ ರವೀಂದ್ರ, ಬಿ.ಎಂ.ಸುದೇವ್, ಸುಧೀರ್‌ಕುಮಾರ್ ಮುರೊಳ್ಳಿ, ಡಿ.ಬಿ.ರಾಜೇಂದ್ರ, ಎಚ್.ಎಂ.ಸತೀಶ್, ಗ್ರಾಮಸ್ಥರು ಇದ್ದರು.