ಪರಿಶ್ರಮಪಟ್ಟರೆ ಸಮಾಜದಲ್ಲಿ ಉತ್ತಮ ಸ್ಥಾನ

04M.D.R.6
ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಹೊಂಬಾಳಮ್ಮ ಡಿ.ಕರಡೀಗೌಡ ಪದವಿಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಕೆ.ವಿವೇಕಾನಂದ, ವಿ.ಕೆ.ಜಗದೀಶ್, ಕೆ.ಸಿ.ಜೋಗಿಗೌಡ, ಗೀತಾಜೋಗಿಗೌಡ, ನಟರಾಜು, ಚೆಲುವರಾಜು ಇದ್ದರು.
Published on

ಮದ್ದೂರು: ವಿದ್ಯೆ ಯಾರಿಂದಲೂ ಕದಿಯಲಾಗದ ಆಸ್ತಿ. ಇದನ್ನು ವಿದ್ಯಾರ್ಥಿಗಳು ದುರ್ಬಳಕೆ ಮಾಡಿಕೊಳ್ಳದೆ ಸದುಪಯೋಗ ಪಡಿಸಿಕೊಂಡಲ್ಲಿ ಸಮಾಜದಲ್ಲಿ ಸತ್ಪ್ರಜೆಯಾಗಲು ಸಾಧ್ಯ ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಬೆಸಗರಹಳ್ಳಿಯ ಹೊಂಬಾಳಮ್ಮ ಡಿ.ಕರಡೀಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಮದ್ದೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಶಿಕ್ಷಣ ಪಡೆದುಕೊಂಡರೆ ಎಲ್ಲಿ ಬೇಕಾದರೂ ಅತ್ಯುತ್ತಮ ಬದುಕು ಕಟ್ಟಿಕೊಂಡು ನೆಮ್ಮದಿಯಾಗಿ ಜೀವನ ನಡೆಸಬಹುದು. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ಹಾಕಲು ಮುಂದಾಗಬೇಕು. ಇದರಿಂದ ಪ್ರತಿಭೆ ಜಗತ್ತಿಗೆ ತಿಳಿಯಲಿದೆ. ಸೋಲು, ಗೆಲುವು ಲೆಕ್ಕ ಹಾಕದೆ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಭಾಷಣ ಮಾಡಿದ ಶಾಲಾ ಶಿಕ್ಷಣ ಇಲಾಖೆಯ(ಪಪೂ) ಉಪ ನಿರ್ದೇಶಕ ಸಿ.ಚಲುವಯ್ಯ, ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುವ ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು ಅಣಿಯಾಗಬೇಕಾಗಿರುವುದು ಅನಿವಾರ್ಯ. ಈ ನಿಟ್ಟಿಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಉದಯ್ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರನ್ನು ಮಾನಸ ವಿದ್ಯಾಸಂಸ್ಥೆಯಿಂದ ಅಭಿನಂದಿಸಲಾಯಿತು. ಮದ್ದೂರು ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು.

ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಎಚ್.ಪಿ.ನಾಗರಾಜು, ಖಜಾಂಚಿ ವಿ.ಕೆ.ಸನತ್‌ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಜಿಲ್ಲಾ ಪ್ರಾಂಶುಪಾಲ ಸಂಘದ ಅಧ್ಯಕ್ಷ ಯು.ಎಸ್.ನಟರಾಜು, ಪ್ರಾಂಶುಪಾಲೆ ಗೀತಾ ಜೋಗಿಗೌಡ, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಅಂಕೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net