

ಹುಣಸೂರು: ಬಡತನದ ನಡುವೆಯೂ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಮೂಲಕ ಗಿರಿಜನ ಕುಟುಂಬದ ಮಕ್ಕಳು ಇತರರಿಗೆ ಮಾದರಿಯಾಗಿದ್ದಾರೆ.
ಒಂದೇ ಕುಟುಂಬದಲ್ಲಿ ಬರೋಬ್ಬರಿ ಮೂವರು ಆಟಗಾರರು ತಮ್ಮ ಕ್ರೀಡಾ ಸಾಮರ್ಥ್ಯವನ್ನು ರಾಜ್ಯ, ದೇಶದಲ್ಲಿ ಪ್ರದರ್ಶಿಸುವ ಮೂಲಕ ಕಡುಬಡತನದ ನಡುವೆಯೇ ಈ ಪ್ರತಿಭೆಗಳು ಅರಳುತ್ತಿದ್ದು, ಇತರ ಕ್ರೀಡಾಪಟುಗಳಿಗೆ ಮಾದರಿ ಎನ್ನಲು ಅಡ್ಡಿಯಿಲ್ಲ.
ಹುಣಸೂರು ನಗರದಿಂದ 3 ಕಿ.ಮೀ. ದೂರದ ಬಾಚಳ್ಳಿ ರಸ್ತೆ ಬಳಿಯಿರುವ ಅಂಬೇಡ್ಕರ್‌ನಗರ ನಿವಾಸಿ ವೇಣುಗೋಪಾಲ್-ವಸಂತಾ ದಂಪತಿ ಪುತ್ರ ವಿಜಯ್, ಪುತ್ರಿ ಪವಿತ್ರಾ ಹಾಗೂ ವಸಂತಾ ಅವರ ಸಹೋದರ ಶರತ್‌ಕುಮಾರ್ ವಿವಿಧ ಅಥ್ಲೆಟಿಕ್ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರತಿಭೆಯಲ್ಲಿ ಸಿರಿವಂತರಿವರು: ಪಿಯು ವ್ಯಾಸಂಗ ಮಾಡಿರುವ ಜೇನುಕುರುಬ ಜನಾಂಗದ ವಸಂತಾ ಅವರ ತಂದೆ ಗಜೇಂದ್ರ-ರಾಧಾ ದಂಪತಿಗೆ 7 ಮಕ್ಕಳು. ಎಲ್ಲರೂ ಅಂಬೇಡ್ಕರ್ ನಗರದ ನಿವಾಸಿಗಳಾಗಿದ್ದು, ಕೂಲಿ ಮಾಡಿ ಬದುಕು ನಡೆಸುತ್ತಿದ್ದಾರೆ. ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಅವರ ಸತತ ಪ್ರಯತ್ನದ ಫಲವಾಗಿ ಬಾಚಳ್ಳಿ ರಸ್ತೆಯಲ್ಲಿ ಅಂಬೇಡ್ಕರ್ ನಗರ ಸ್ಥಾಪಿತವಾಗಿದ್ದು, 30ಕ್ಕೂ ಹೆಚ್ಚು ಕುಟುಂಬಗಳು ನೆಲ ನಿಂತಿವೆ. ಗುಡಿಸಲು ಮನೆಯ ಹಕ್ಕುಪತ್ರ ಪಡೆದಿರುವ ಇವರಿಗೆ ಮನೆಗಳ ಖಾತೆ ನೀಡುವ ಪ್ರಕ್ರಿಯೆ ನಡೆದಿದೆ. ಈ ಕಾಲನಿಯಲ್ಲಿ ಬಡತನದ್ದೇ ಕಾರುಬಾರು. ಬೆಳಗಾದರೆ ಪಾಲಕರು ಕೂಲಿ ಹುಡುಕಿ ಹೊರಡುತ್ತಾರೆ. ಸಣ್ಣಪುಟ್ಟ ಮಕ್ಕಳು ಬೀದಿಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತವೆ. ಇಂತಹ ಪರಿಸರದಲ್ಲೂ ವಸಂತಾ ತನ್ನ ಇಬ್ಬರು ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ಮಾತ್ರವಲ್ಲದೆ ತನ್ನ ಒಡಹುಟ್ಟಿದ ಸಹೋದರ ಕೂಡ ಪಿಯು ವ್ಯಾಸಂಗ ಮಾಡುತ್ತಿರುವುದು ಶಿಕ್ಷಣದ ಬಗ್ಗೆ ಕುಟುಂಬದಲ್ಲಿನ ಆಸಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಕ್ಕಳ ಸಾಧನೆ ಅನನ್ಯ: ವಸಂತಾ ಕೂಡ ಶಾಲಾ ದಿನಗಳಲ್ಲಿ ಕ್ರೀಡಾಪಟುವಾಗಿದ್ದರು. ಕಬಡ್ಡಿ ಸೇರಿದಂತೆ ವಿವಿಧ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ತಮ್ಮ ಸಹೋದರಿಯರ ಜತೆ ಪಾಲ್ಗೊಳ್ಳುತ್ತಿದ್ದರು.
25 ವರ್ಷಗಳ ಹಿಂದೆ ಶಾಲೆಯಲ್ಲಿ ಬಿಸಿಯೂಟ ಇರಲಿಲ್ಲ. ಸಮವಸ್ತ್ರ, ಸೈಕಲ್ ಏನೂ ಇರಲಿಲ್ಲ. ಖಾಲಿ ಹೊಟ್ಟೆಯಲ್ಲೇ ಪಿಯುಸಿ ಮುಗಿಸಿದ್ದೇನೆ. ಇಂದಿನಷ್ಟು ಅನುಕೂಲವಿದ್ದಿದ್ದರೆ ನಾನು ಇನ್ನಷ್ಟು ಓದುತ್ತಿದ್ದೆ ಎಂದು ವಸಂತ ತಮ್ಮ ಮನದಾಳವನ್ನು ಹಂಚಿಕೊಳ್ಳುತ್ತಾರೆ.
ಪುತ್ರ ವಿಜಯ್ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾದ ನಂತರ ಶಿಕ್ಷಣ ತೊರೆದಿದ್ದಾನೆ. 3 ಸಾವಿರ ಮೀಟರ್ ಮತ್ತು 1500 ಮೀಟರ್ ಓಟದ ಸ್ಪರ್ಧೆ ಮತ್ತು ರಿಲೇಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದು, ತಾಲೂಕು, ಜಿಲ್ಲೆ, ವಲಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾನೆ.
ಜಿಂಕೆಯಂತೆ ಜಿಗಿಯುವ ಪವಿತ್ರಾ: ಪುತ್ರಿ ಪವಿತ್ರಾ ಚಿಕ್ಕಹುಣಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ. ಇದೀಗ ಶಿವಮೊಗ್ಗದಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ 600 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾಳೆ. 7ನೇ ತರಗತಿ ಓದುತ್ತಿದ್ದರೂ ಈಕೆಯ ಸಾಧನೆಗೆ ಸಾಟಿಯಿಲ್ಲ. ಹೈಜಂಪ್,ಲಾಂಗ್ ಜಂಪ್,. ರನ್ನಿಂಗ್ ರೇಸ್, ರಿಲೇ... ಹೀಗೆ ಅಥ್ಲೆಟಿಕ್ ವಿಭಾಗದಲ್ಲಿ ಪವಿತ್ರಾಳಿಗೆ ಆಕೆಯೇ ಸಾಟಿ ಎನ್ನುವಂತಾಗಿದೆ. ವಿಜಯ್‌ಗೆ ಚಿಕ್ಕಹುಣಸೂರಿನ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಫ್ಸರ್ ಪಾಷಾ ಪ್ರೇರಣೆಯಾದರೆ, ಪವಿತ್ರಾಳಿಗೆ ಶಾಲೆಯ ಮುಖ್ಯಶಿಕ್ಷಕ ಕರಿಯಪ್ಪ ಮಾರ್ಗದರ್ಶಕರಾಗಿ ಪ್ರತಿಭೆಗಳನ್ನು ಬೆಳಗಿಸುವುಲ್ಲಿ ಶ್ರಮಿಸುತ್ತಿದ್ದಾರೆ.
ಸಹೋದರನ ಸಾಧನೆ: ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಸಂತಾರ ಸಹೋದರ(ತಮ್ಮ)ಶರತ್‌ಕುಮಾರ್ ವಾರದ ಹಿಂದೆ ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಂದಿದ್ದಾರೆ. ಟ್ರಿಪಲ್ ಜಂಪ್, ಲಾಂಗ್ ಜಂಪ್, ಡಿಸ್ಕಸ್‌ಥ್ರೋ, ಜಾವಲಿನ್ ಥ್ರೋ, ರಿಲೇ ವಿಭಾಗದಲ್ಲಿ ಎತ್ತಿದ ಕೈ. ತಮ್ಮ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕಾರ್ತಿಕ್‌ರನ್ನು ಶರತ್‌ಕುಮಾರ್ ಸ್ಮರಿಸುತ್ತಾರೆ. ಮನೆಯಲ್ಲಿ ಗಳಿಸಿದ ಪದಕಗಳು, ಮೆಡಲ್‌ಗಳು, ಪ್ರಶಸ್ತಿಪತ್ರಗಳ ರಾಶಿಯೇ ಇದೆ.
ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ ವತಿಯಿಂದ ಬೆಂಗಳೂರಿನ ಕ್ರೀಡಾ ವಸತಿ ಶಾಲೆಯಲ್ಲಿ ಸೇರಲು ಅರ್ಹತೆ ಗಳಿಸಿದ್ದಾರೆ. ಉಚಿತವಾಗಿ ಸರ್ಕಾರವೇ ಇವರ ವ್ಯಾಸಂಗ ಮತ್ತು ಕ್ರೀಡಾತರಬೇತಿ ನೀಡಲು ಮುಂದೆ ಬಂದಿದ್ದು, ಕುಟುಂಬದವರು ಕ್ರೀಡಾ ಶಾಲೆಗೆ ಸೇರಿಸಲು ಆಲೋಚಿಸುತ್ತಿದ್ದಾರೆ. ದಿನ ನಿತ್ಯದ ಬದುಕಿಗೆ ಬಡತನವೆಂಬ ಅಂಧಕಾರದ ನಡುವೆ ಸಾಧನೆಯ ಶಿಖರವೇರಲು ಹಠ ತೊಟ್ಟು ಪ್ರಯತ್ನಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ, ತಾಲೂಕು ಆಡಳಿತ ಈ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಲ್ಲಲಿ ಎನ್ನುವುದು ನಾಗರಿಕರ ಆಶಯ.
ನನ್ನ ಮಗಳು ಪವಿತ್ರಾಳಿಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಹಂಬಲ. ಸಹೋದರ ಶರತ್‌ಗೆ ತರಬೇತುದಾರನಾಗಲು ಆಸಕ್ತಿ ಇದೆ. ನಮಗಿರುವ ಆರ್ಥಿಕ ಸಂಪನ್ಮೂಲದ ನಡುವೆಯೇ ನಮ್ಮ ಕೈಲಾದ ಪ್ರಯತ್ನ ನಡೆಸಿದ್ದೇವೆ. ಅವರಲ್ಲಿರುವ ಇನ್ನಷ್ಟು ಪ್ರತಿಭೆ ಹೊರಬರಲು ಸರ್ಕಾರ, ಆಡಳಿತ ನಮಗೆ ಬೆಂಬಲ ನೀಡಿದಲ್ಲಿ ಸಾಧನೆ ಇನ್ನಷ್ಟು ಮಾಡಲು ಸಾಧ್ಯವಿದೆ.
ವಸಂತಾ, ಅಂಬೇಡ್ಕರ್ ನಗರ, ಹುಣಸೂರು
ಈ ಮೂವರು ಮಕ್ಕಳು ಈ ತಾಲೂಕಿನ ಹೆಮ್ಮೆಯ ಪ್ರತಿಭೆಗಳು. ಇವರನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾಲೂಕು ಆಡಳಿತ ಈ ಮಕ್ಕಳ ಅಭ್ಯಾಸಕ್ಕಾಗಿ ಅಗತ್ಯವಿರುವ ಕ್ರೀಡಾ ಸಲಕರಣೆ, ಅವಕಾಶ ಎಲ್ಲವನ್ನೂ ನೀಡಬೇಕು. ಕೂಲಿನಾಲಿ ಮಾಡಿ ಬದುಕುವ ಪಾಲಕರು ಎಷ್ಟುತಾನೆ ಮಾಡಲು ಸಾಧ್ಯ? ತಾಲೂಕು ಆಡಳಿತ ಇತ್ತ ಗಮನಹರಿಸಲಿ.
ನಿಂಗರಾಜ ಮಲ್ಲಾಡಿ ಜಿಲ್ಲಾ ಸಂಚಾಲ, ದಲಿತ ಸಂಘರ್ಷ ಸಮಿತಿ, ಹುಣಸೂರು