ಬ್ಯೂಟಿಷಿಯನ್, ಹೊಲಿಗೆ ವೃತ್ತಿಗೆ ಉತ್ತಮ ಅವಕಾಶ

7
Published on

ಶ್ರೀ ದುರ್ಗಾ ಫೌಂಡೇಷನ್ ಟ್ರಸ್ಟ್ ಹಾಗೂ ಬ್ಯೂಟಿಷಿಯನ್ ಅಸೋಸಿಯೇಷನ್ ವತಿಯಿಂದ ಬ್ಯೂಟಿಷಿಯನ್ ವೃತ್ತಿ ಸಾಧಕರನ್ನು ಸನ್ಮಾನಿಸಲಾಯಿತು.

ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಬ್ಯೂಟಿಷಿಯನ್ ದಿನದ ಅಂಗವಾಗಿ ಬ್ಯೂಟಿಷಿಯನ್‌ಗಳಾದ ಮಾಲತಿ, ಆರ್.ವಿನುತಾ, ಚೈತ್ರಾ ಮಹೇಶ್, ಟಿ.ಎನ್.ಗಂಗಾಂಬಿಕಾ, ಸುಮಾ ನಾಯ್ಡು ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಆರ್.ಎಚ್.ಪವಿತ್ರಾ ಮಾತನಾಡಿ, ಮಹಿಳೆಯರಲ್ಲಿ ಈಗ ಸೌಂದರ್ಯಪ್ರಜ್ಞೆ ಹೆಚ್ಚುತ್ತಿದೆ. ಬಹುತೇಕ ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳಲು ಬ್ಯೂಟಿಷಿಯನ್‌ಗಳ ಬಳಿ ಹೋಗುತ್ತಿದ್ದಾರೆ. ಹಾಗಾಗಿ ಬ್ಯೂಟಿಷಿಯನ್ ಮತ್ತು ಹೊಲಿಗೆ ವೃತ್ತಿಗೆ ಉತ್ತಮ ಅವಕಾಶಗಳು ದೊರೆಯುತ್ತಿವೆ ಎಂದರು.

ಎಲ್ಲರಿಗೂ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಹಾಗಾಗಿ ಸ್ವ-ಉದ್ಯೋಗ ಪ್ರಾರಂಭಿಸಿ ಇನ್ನಷ್ಟು ಜನರಿಗೆ ಉದ್ಯೋಗ ನೀಡುವ ಮೂಲಕ ಮಾದರಿ ಆಗಬೇಕಿದೆ. ಹೆಣ್ಣು ಮಕ್ಕಳಿಗೆ ತಾನು ಸುಂದರವಾಗಿರಬೇಕೆನ್ನುವ ಹಂಬಲವಿದೆ. ದೇವರು ಕೊಟ್ಟ ನಮ್ಮ ರೂಪಕ್ಕೆ ಮೆರುಗು ಕೊಡುವ ಕೆಲಸವನ್ನು ಬ್ಯೂಟಿ ಪಾರ್ಲರ್‌ಗಳ ಮೂಲಕ ನಡೆಯುತ್ತಿದೆ. ತಾನು ಕಲಿತ ವಿದ್ಯೆಯನ್ನು ಆಧರಿಸಿ ಸ್ವ ಉದ್ಯೋಗ ಆರಂಭಿಸಿರುವ ಮಹಿಳೆಯರ ಸಾಧನೆಯನ್ನು ಎಲ್ಲರೂ ಶ್ಲಾಘಿಸಬೇಕಿದೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ಶೋಭಾರಾಣಿ ಮಾತನಾಡಿ, 21ನೇ ಶತಮಾನದ ವೈಜ್ಞಾನಿಕ ಯುಗದಲ್ಲಿ ಮಹಿಳೆ ಪುರುಷನಷ್ಟೇ ಸಮರ್ಥಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ನಗರ-ಗ್ರಾಮೀಣ ಪ್ರದೇಶವೆನ್ನದೆ ಸೌಂದರ್ಯಪ್ರಜ್ಞೆ ಎಲ್ಲ ವಯೋಮಾನದ ಮಹಿಳೆಯರಲ್ಲಿ ಮೂಡುತ್ತಿದೆ. ಬ್ಯೂಟಿ ಪಾರ್ಲರ್ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಇದೆ. ಮಹಿಳೆಯರು ಯಶಸ್ವಿ ಉದ್ಯಮಿಗಳಾಗಲು ಅವಕಾಶ ಇದೆ ಎಂದರು.

ಶಿವಮೊಗ್ಗ ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷೆ ಅಶ್ವಿನಿ ಪಿ.ಗೌಡ ಮಾತನಾಡಿದರು. ಶ್ರೀ ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಅಹಲ್ಯಾ, ಮಾಲಿನಿ ಆರ್.ಪಾಲಾಕ್ಷ, ಸುಗುಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net