

ಶಿವಮೊಗ್ಗ: ಹಲವು ದಶಕಗಳಿಂದ ಭೂಹಕ್ಕಿಗಾಗಿ ಪರಿತಪಿಸುತ್ತಿರುವ ಶರಾವತಿ ಸಂತ್ರಸ್ತರಿಗೆ ನಮ್ಮ ಸರ್ಕಾರ ಶೀಘ್ರವೇ ಸಿಹಿ ಸುದ್ದಿ ನೀಡಲಿದೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಸಂತ್ರಸ್ತರಿಗೆ ಭೂಮಿ ಖಾತೆ ಮಾಡಿಕೊಡಲು ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿದೆ. ಈಗ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದರು.
ಒಳ್ಳೆಯ ವಕೀಲರನ್ನು ನೇಮಕ ಮಾಡಿ, ಸುಪ್ರೀಂ ಕೋರ್ಟ್‌ನಲ್ಲಿ ತ್ವರಿತವಾಗಿ ವಿಚಾರಣೆ ಮುಗಿಯುವಂತೆ ನೋಡಿಕೊಂಡು ಸಂತ್ರಸ್ತರಿ ಭೂಮಿ ನೀಡಲಾಗುವುದು. ಈ ಮೂಲಕ ಹಲವು ವರ್ಷಗಳ ಸಮಸ್ಯೆಯೊಂದಕ್ಕೆ ಮುಕ್ತಿಹಾಡಲು ನಮ್ಮ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧೆಡೆ ಒತ್ತುವರಿ ಪ್ರಕರಣಗಳು ಗಮನಕ್ಕೆ ಬರುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅರಣ್ಯ ಭೂಮಿ ಒತ್ತುವರಿ ಮಾಡುವವರ ವಿರುದ್ಧ ನಮ್ಮ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಖಂಡ್ರೆ ಎಚ್ಚರಿಸಿದರು.
ಶೀಘ್ರ ನೇಮಕಾತಿ ಪತ್ರ:ಅರಣ್ಯ ಇಲಾಖೆಯಲ್ಲಿ 310 ವೀಕ್ಷಕರ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಿದೆ. ಶೀಘ್ರವೇ ಆದೇಶ ಹೊರಡಿಸಲಾಗುವುದು. ವನರಕ್ಷಕರ ಹುದ್ದೆಗಳು ಖಾಲಿಯಿದ್ದು, 540 ಸ್ಥಾನಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದರು.