ಭೂ ಖರೀದಿದಾರರಿಗೆ ಸಿಹಿ: ಆದಾಯ ಹೆಚ್ಚಳ ಉದ್ದೇಶ, ಮಾರ್ಗಸೂಚಿ ದರ ಕಡಿತಕ್ಕೆ ಸರ್ಕಾರ ನಿರ್ಧಾರ

Land Purchase 1
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ನಿವೇಶನ, ಭೂಮಿ ಅಥವಾ ಫ್ಲ್ಯಾಟ್ ಖರೀದಿಗೆ ಉದ್ದೇಶಿಸಿದ್ದೀರಾ? ಹಾಗಿದ್ದರೆ ಕೆಲ ದಿನ ಕಾಯುವುದು ಒಳಿತು. ಏಕೆಂದರೆ ರಾಜ್ಯ ಸರ್ಕಾರ ಭೂಮಿಯ ಮಾರ್ಗಸೂಚಿ ದರ ತಗ್ಗಿಸಲು ಮುಂದಾಗಿದೆ. ಕೃಷಿ ಭೂಮಿ, ಕೃಷಿಯೇತರ ಭೂಮಿ, ಮನೆ, ಅಪಾರ್ಟ್ ಮೆಂಟ್, ವಾಣಿಜ್ಯ ಮಳಿಗೆಗಳ ಮಾರಾಟ ಹಾಗೂ ಖರೀದಿ ಸಂದರ್ಭದಲ್ಲಿ ಭೂಮಿಯ ಮಾರ್ಗಸೂಚಿ ದರ ಅಸಹಜವಾಗಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗುತ್ತಿಲ್ಲ. ಹೀಗಾಗಿ ಮಾರ್ಗಸೂಚಿ ದರ ಕಡಿಮೆ ಮಾಡಿ ರಿಯಲ್ ಎಸ್ಟೇಟ್ ಉದ್ಯಮದ ಚೇತರಿಕೆಗೆ ಅವಕಾಶ ಮಾಡಿಕೊಡಲು ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.

ಮಾರ್ಗಸೂಚಿ ದರವನ್ನು ಸರ್ಕಾರ ಪ್ರತಿ ವರ್ಷ ಹೆಚ್ಚಳ ಮಾಡುವುದು ಮೊದಲಿನಿಂದ ಬೆಳೆದು ಬಂದಿರುವ ರೂಢಿ. ಆದರೆ ಕರೊನಾ ಕಾರಣದಿಂದ ಎರಡು ವರ್ಷದಿಂದ ಹೆಚ್ಚಳ ಮಾಡಿಲ್ಲ. ಹಾಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿ ನಡೆಯುತ್ತಿಲ್ಲ. ಸದ್ಯ ಕರೊನಾ ಭೀತಿಯ ಜತೆಯಲ್ಲೇ ಜನಜೀವನ ಸಹಜಸ್ಥಿತಿಗೆ ನಿಧಾನವಾಗಿ ಮರಳುತ್ತಿದ್ದು, ಮಾರ್ಗಸೂಚಿ ದರ ಇಳಿಸುವುದರಿಂದ ಭೂ ಉದ್ಯಮಕ್ಕೆ ಚೇತರಿಕೆಯ ಟಾನಿಕ್ ಲಭಿಸುವ ನಿರೀಕ್ಷೆ ಇದೆ. ಮಾರ್ಗಸೂಚಿ ದರವನ್ನು ಈಗಿರುವುದಕ್ಕಿಂತ ಶೇ.15 ರಿಂದ 20 ತಗ್ಗಿಸುವ ನಿಟ್ಟಿನಲ್ಲಿ ವರದಿ ನೀಡುವಂತೆ ಕಂದಾಯ ಸಚಿವ ಆರ್. ಅಶೋಕ್ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವರದಿ ಆಧಾರದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಮಾರ್ಗಸೂಚಿ ಎಷ್ಟಿರಬೇಕು ಎಂಬ ಪ್ರಸ್ತಾವನೆ ಸಲ್ಲಿಸಲಿದೆ. ಆ ನಂತರ ಕಂದಾಯ ಇಲಾಖಾ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡು, ಸಚಿವ ಸಂಪುಟದ ಒಪ್ಪಿಗೆ ಪಡೆದು ಪ್ರಕಟಿಸಲಾಗುತ್ತದೆ.

ಶೇ.10 ಕಡೆ ಹೆಚ್ಚಳ: ರಾಜ್ಯದಲ್ಲಿ ಒಟ್ಟಾರೆ 255 ಉಪ ನೋಂದಣಾಧಿಕಾರಿ ಕಚೇರಿಗಳಿವೆ. ಅವುಗಳ ಪೈಕಿ ಶೇ. 10 ಕಡೆ ಮಾತ್ರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾರ್ಗಸೂಚಿ ಬೆಲೆ ಇದೆ. ಅಂತಹ ಕಡೆ ಮಾರ್ಗಸೂಚಿ ಬೆಲೆಯನ್ನು ಶೇ.5 ರಿಂದ 10 ಹೆಚ್ಚಿಸಲಾಗುತ್ತದೆ. ಉಳಿದ ಶೇ.90 ಕಚೇರಿಗಳ ವ್ಯಾಪ್ತಿಯಲ್ಲಿ ಕಡಿಮೆ ಮಾಡಲಾಗುತ್ತದೆ.

ಮಾರ್ಗಸೂಚಿ ಬೆಲೆ ಏಕೆ?: 1990ರಲ್ಲಿ ಮಾರ್ಗಸೂಚಿ ಬೆಲೆ ನಿಗದಿ ಪದ್ಧತಿ ಜಾರಿಗೆ ಬಂತು. ಯಾವುದೇ ನೋಂದಣಿಯಾಗಬೇಕಾದರೆ ಮಾರ್ಗಸೂಚಿ ಬೆಲೆ ಶೇ.5.65 ಮುದ್ರಾಂಕ ಹಾಗೂ ಶೇ.1 ನೋಂದಣಿ ವೆಚ್ಚಕ್ಕೆ ಆಗಬೇಕು. ಅದಕ್ಕಿಂತ ಕಡಿಮೆ ಮಾಡುವಂತಿಲ್ಲ ಎಂಬ ಕಾರಣಕ್ಕೆ ಪ್ರದೇಶಗಳ ವಿವಿಧ ಅಭಿವೃದ್ಧಿ ಆಯಾಮ ಆಧರಿಸಿ ಮಾರ್ಗಸೂಚಿ ಬೆಲೆ ನಿಗದಿ ಮಾಡಲಾಗುತ್ತದೆ. ಪ್ರತಿ ವರ್ಷ ಶೇ.5 ರಿಂದ 10 ಹೆಚ್ಚಳ ಮಾಡುತ್ತ ಬರುತ್ತಿರುವುದರಿಂದ ಬೆಲೆ ಜಾಸ್ತಿಯೇ ಆಗಿದೆ. ಕೆಲವೆಡೆ ಮಾರುಕಟ್ಟೆ ಬೆಲೆಯ ಶೇ.15 ರಿಂದ 20ರಷ್ಟು ಕಡಿಮೆ ಮಾರ್ಗಸೂಚಿ ಬೆಲೆ ಇದ್ದರೆ, ಇನ್ನೂ ಕೆಲವೆಡೆ ಶೇ. 20 ರಿಂದ 25 ಹೆಚ್ಚಿದೆ.

ಮುದ್ರಾಂಕ ಶುಲ್ಕ ಕಡಿತ: ಕರೊನಾದಿಂದ ತತ್ತರಿಸಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲ ಮಾಡಲು ಸರ್ಕಾರ ಜೂನ್​ನಲ್ಲಿ 45 ಲಕ್ಷ ರೂ. ಗಳವರೆಗಿನ ಅಪಾರ್ಟ್​ವೆುಂಟ್​ಗಳ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ. 5.65 ರಿಂದ ಶೆ.3ಕ್ಕೆ ಇಳಿಸಿದೆ.

ಎಷ್ಟು ತೆರಿಗೆ ಸಂಗ್ರಹ?

ರಾಜ್ಯಕ್ಕೆ ತೆರಿಗೆ ತಂದುಕೊಡುವ 4 ಮುಖ್ಯ ವಲಯಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಸಹ ಒಂದು. ಕಳೆದ ವರ್ಷ ಹಾಗೂ ಈ ವರ್ಷ 12655 ಕೋಟಿ ರೂ. ನಿಗದಿ ಮಾಡಲಾಗಿದೆ. ಕಳೆದ ವರ್ಷ 10 ಸಾವಿರ ಕೋಟಿ ರೂ.ಗಳನ್ನು ದಾಟಿಲ್ಲ. 2019-20ನೇ ಸಾಲಿನಲ್ಲಿ 11828 ಕೋಟಿ ರೂ. ನಿಗದಿಯಾಗಿದ್ದರೂ ಸಂಗ್ರಹ 10 ಸಾವಿರ ಕೋಟಿ ರೂ.ಗಳಷ್ಟು ಮಾತ್ರ ಇತ್ತು.

ಉದ್ದೇಶವೇನು?

ರಿಯಲ್ ಎಸ್ಟೇಟ್ ಚಟುವಟಿಕೆ ಹೆಚ್ಚಾದರಷ್ಟೇ ನೋಂದಣಿ ಹೆಚ್ಚಾಗಿ ತೆರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹ ಸಾಧ್ಯ. ಹೀಗಾಗಿ ಈ ಉದ್ಯಮ ವಲಯದಿಂದಲೂ ಮಾರ್ಗಸೂಚಿ ದರ ಇಳಿಕೆಗೆ ಒತ್ತಾಯ ಇದೆ. ಇದಲ್ಲದೆ ಕರೊನಾ ಕಾರಣದಿಂದಾಗಿ ಜನರಲ್ಲಿ ನಗದು ಹರಿವು ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಮಾರ್ಗಸೂಚಿ ದರ ಹೆಚ್ಚಿಸದಿರುವುದು ಸರ್ಕಾ ರಕ್ಕೆ ಅನಿವಾರ್ಯವೂ ಹೌದು.

ಪ್ರತಿ ವರ್ಷ ಮಾರ್ಗಸೂಚಿ ದರ ಹೆಚ್ಚಿಸಲಾಗುತ್ತಿತ್ತು. ಆದರೆ ಮಾರ್ಗಸೂಚಿ ದರ ಅಸಹಜವಾಗಿವೆ. ಇದರಿಂದ ಭೂಮಿ, ಮನೆ ಖರೀದಿಸುವವರಿಗೆ ಅನನುಕೂಲವಾಗುತ್ತಿದೆ. ಆದ್ದರಿಂದ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ವರದಿ ಕೇಳಿದ್ದು, ಆದಷ್ಟು ಬೇಗ ತೀರ್ವನಿಸಲಾಗುವುದು. | ಆರ್. ಅಶೋಕ್ ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net