

ಹೊನ್ನಾವರ: ಇಂದು ಶಿಕ್ಷಣವು ಸಾಕಷ್ಟು ಬದಲಾವಣೆ ಆಗಿದೆ. ವಿದ್ಯಾರ್ಥಿಗಳು ಜೀವನ ಶಿಕ್ಷಣ ಪಡೆಯುವ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದು ಗೋಲ್ ಸಂಸ್ಥೆಯ ಅಧ್ಯಕ್ಷ ಎ.ಆರ್. ನಾಯ್ಕ ಹೇಳಿದರು.
ತಾಲೂಕಿನ ಮಂಕಿಯ ಗೋಲ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ‘ಮಹತ್ವಾಕಾಂಕ್ಷೆ ನಾಯಕರಿಗೆ ಜಾಗತಿಕ ಅವಕಾಶಗಳು’ ಎಂಬ ಧ್ಯೇಯವಾಕ್ಯದಡಿ ಆಯೋಜಿಸಿದ್ದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಯ ಹಾಗೂ ಅವಕಾಶಗಳು ಬಂದಾಗ ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸದರೆ ಜವಾಬ್ದಾರಿ ಮುಗಿಯುವುದಿಲ್ಲ. ಅಲ್ಲಿಂದ ಜವಾಬ್ದಾರಿ ಆರಂಭವಾಗಲಿದೆ. ಮಕ್ಕಳ ಜತೆ ಮನೆಯಲ್ಲಿ ಪಾಲಕರು ಪ್ರತಿನಿತ್ಯ ಸಮಯ ಕಳೆಯಬೇಕು. ನಮ್ಮ ನಂಬಿಕೆ, ಸಂಕಲ್ಪ ದೃಢವಾಗಿದ್ದರೆ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಪ್ರತಿಯೊಂದು ಮಾತನ್ನು ಶ್ರದ್ಧೆಯಿಂದ ಆಲಿಸಬೇಕು. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಸಾಧನೆ ಮಾಡಬೇಕು. ವಿದ್ಯಾರ್ಥಿ ಜೀವನ ಒಂದೇ ಬಾರಿ ಬರುವುದರಿಂದ ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ಟ್ರಸ್ಟಿ ಬಸವರಾಜ ಗೌಡ ಮಾತನಾಡಿದರು. ಪ್ರಾಂಶುಪಾಲೆ ಸವಿತಾ ಪವಾರ ಉಪಸ್ಥಿತರಿದ್ದರು.