

ಮುಧೋಳ: ಯುಕೆಪಿ ಸಂತ್ರಸ್ತರ ಹೋರಾಟದ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು. ಆದಷ್ಟು ಬೇಗ ಸರ್ಕಾರದಿಂದ ತಮಗೆಲ್ಲ ಒಳ್ಳೆಯ ಸಂದೇಶ ಬರಲಿದೆ ಎಂದು ಸಚಿವ ಆರ್.ಬಿ. ತಿಮ್ಮಾಪೂರ ಭರವಸೆ ನೀಡಿದರು.
ನಗರದ ಪ್ರವಾಸ ಮಂದಿರದಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಯುಕೆಪಿ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ನೇತೃತ್ವದ ನಿಯೋಗದೊಂದಿಗೆ ಮಾತನಾಡಿದ ಅವರು, ಯುಕೆಪಿ-3 ಗೆ ಸಂಬಂಧಿಸಿದಂತೆ ಕ್ಯಾಬಿನೆಟ್‌ದಲ್ಲಿ ಶೀಘ್ರ ಈ ಕುರಿತು ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು. ಅದಕ್ಕೂ ಮೊದಲು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು.
ಅದೃಶ್ಯಪ್ಪ ದೇಸಾಯಿ ಮಾತನಾಡಿ, ಆಲಮಟ್ಟಿ ಜಲಾಶಯವನ್ನು 519 ರಿಂದ 524.24 ಮೀಟರ್‌ಗೆ ಎತ್ತರಿಸುವುದು. ಯುಕೆಪಿ-3ನೇ ಹಂತದ ವ್ಯಾಪ್ತಿಯಲ್ಲಿ ಮುಳುಗಡೆಯಾಗುವ ಜಮೀನುಗಳಿಗೆ ಕನ್ಸಲಂಟ್ ಆವಾರ್ಡ್ ಪುನರ್ವಸತಿ ಮತ್ತು ಪುನರ್ನಿರ್ಮಾಣ ಕೈಗೊಳ್ಳುವ ಕುರಿತು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಿಎಂ ಭರವಸೆ ನೀಡಿದ್ದರು. ಆದರೆ ಈವರೆಗೆ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ ಎಂದರು.
6 ತಿಂಗಳ ಹಿಂದೆ ಸಮಿತಿ ಧರಣಿ ನಡೆಸಿದಾಗಲೂ ಸರ್ಕಾರ ನೀಡಿದ ಭರವಸೆಯಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿತ್ತು. ಶೀಘ್ರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುಶೀಲಕುಮಾರ ಬೆಳಗಲಿ, ಪ್ರಕಾಶ ಅಂತರಗೊಂಡ, ವರ್ಧಮಾನ ನ್ಯಾಮಗೌಡ, ಜಿ.ಡಿ.ದೇಸಾಯಿ, ಆನಂದಪ್ಪ ನಾಯಿಕ, ಈಶ್ವರ ಕರಬಸನ್ನವರ ಇದ್ದರು.