ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮಾವು ಬೆಳೆಗಾರರು

24 CHN 2
Published on

ಚನ್ನಗಿರಿ: ಹಿಂದಿನ ವರ್ಷ ಜೂನ್ ತಿಂಗಳಿನಲ್ಲಿ ಉತ್ತಮ ಮುಂಗಾರು ಮಳೆಯಾಗಿದ್ದು, ಮಾವಿನ ಬೆಳೆಗೆ ಅನುಕೂಲವಾಗಿದೆ. ಮರಗಳು ಮೈ ತುಂಬಿಕೊಂಡು ಹೂಬಿಟ್ಟಿವೆ. ಹಾಗಾಗಿ ಬೆಳೆಗಾರರು ಉತ್ತಮ ಫಸಲು ಬರುವುದೆಂಬ ನಿರೀಕ್ಷೆಯಲ್ಲಿದ್ದಾರೆ.

ತಾಲೂಕಿನ ಬಹುತೇಕ ಭಾಗದಲ್ಲಿ 731 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ ಮತ್ತು ಈ ಬಾರಿ ಉತ್ತಮ ಮಾರುಕಟ್ಟೆ, ಬೆಲೆ ಸಿಗುವ ಲಕ್ಷಣಗಳು ಹೆಚ್ಚಾಗಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಸಂತೇಬೆನ್ನೂರು, ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ, ಸಿದ್ದನಮಠ, ನಾಗೇನಹಳ್ಳಿ, ಕೆರೆಬಿಳಚಿ, ಹೊಸೂರು, ಚಿಕ್ಕಬೆನ್ನೂರು ಮತ್ತು ಉಬ್ರಾಣಿ ಹೋಬಳಿ ಭಾಗದ ಶಂಕರಿಪುರ, ಗೌರಪುರ ಭಾಗದ ಗ್ರಾಮಗಳಲ್ಲಿ ರೈತರು ಮಾವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಎಲ್ಲ ಕಡೆಗಳಲ್ಲಿ ಮಾವಿನ ಮರಗಳು ಹೂಗಳಿಂದ ಕಂಗೊಳಿಸುತ್ತಿದ್ದು, ಬೆಳೆಗಾರರು ಉತ್ತಮ ಫಸಲಿಗಾಗಿ ಕಾಯುತ್ತಿದ್ದಾರೆ. ಪ್ರಸ್ತುತ ಮರಗಳಲ್ಲಿ ಬಿಟ್ಟಿರುವ ಹೂವಿನ ಪ್ರಮಾಣದಷ್ಟೇ ಕಾಯಿ ಬಿಡುತ್ತದೆ ಎಂದು ಅಂದಾಜು ಮಾಡಲಾಗಿದೆ.

ಕಾಲಕಾಲಕ್ಕೆ ನೀರು, ಗೊಬ್ಬರ ಮತ್ತು ಸರಿಯಾಗಿ ನಿರ್ವಹಣೆ ಮಾಡಿದ ಪರಿಣಾಮ ಈ ವರ್ಷ ಉತ್ತಮ ಫಸಲಿನೊಂದಿಗೆ ಹೆಚ್ಚು ಲಾಭಗಳಿಸಲು ಸಾಧ್ಯವಾಗಲಿದೆ. ತಾಲೂಕಿನಲ್ಲಿ ಹೆಚ್ಚಾಗಿ ಬಾದಾಮಿ, ತೋತಾಪುರಿ, ಸಿಂಧೂರ, ನೀಲಂ, ಮಲ್ಲಿಕಾ, ಮಲಗೋಬ ತಳಿಯ ಮಾವಿನ ತೋಟಗಳಲ್ಲಿ ಹೂವಾಗಿದೆ ಎಂದು ಮಾವು ಬೆಳೆಗಾರರು ಹೇಳುತ್ತಿದ್ದಾರೆ.

ಮಾರುಕಟ್ಟೆ: ತಾಲೂಕಿನ ಮಾವಿನ ಹಣ್ಣುಗಳಿಗೆ ಮುಂಬೈ ಮತ್ತು ದಿಲ್ಲಿ ರಾಜ್ಯದಲ್ಲಿ ಹೆಚ್ಚು ಬೇಡಿಕೆ ಇದೆ. ಬೆಳೆಗಾರರು ಬೆಂಗಳೂರು, ಮಹಾನಗರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಾರೆ.

ಮಾವು ಬೆಳೆಗೆ 2-3 ದಿನಕ್ಕೆ ಒಂದು ಬಾರಿ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಹಾಯಿಸಬೇಕಾಗುತ್ತದೆ. ಬೆಳಗಿನ ಜಾವ ಮಂಜು ಅಥವಾ ಶೀತ ವಾತಾವರಣವಿರುವುದರಿಂದ ಗಿಡಕ್ಕೆ ಬೂದಿ ರೋಗ ತಗಲುವ ಸಾಧ್ಯತೆ ಇದೆ. ಹಾಗಾಗಿ ರೋಗ ನಿಯಂತ್ರಣಕ್ಕೆ ದಿನ ಬಿಟ್ಟು ದಿನ ಗಿಡಗಳಿಗೆ ಔಷಧ ಸಿಂಪಡಿಸಿ ಸಮರ್ಪಕ ನಿರ್ವಹಣೆ ಮಾಡಬೇಕು. ಶ್ರೀಕಾಂತ್, ತೋಟಗಾರಿಕಾ ಇಲಾಖೆ ಸಹಾಯಕ ಉಪನಿರ್ದೇಶಕ. ಅಕಾಲಿಕ ಮಳೆ, ಹೆಚ್ಚಿನ ಇಬ್ಬನಿ ಮತ್ತು ಹವಾಮಾನ ವೈಪರೀತ್ಯ ಉಂಟಾಗದಿದ್ದರೆ, ಎಲ್ಲ ಹೂವುಗಳು ಪೀಚು, ಕಾಯಿಗಳಾದರೆ ಉತ್ತಮ ಫಸಲು ಸಿಗಲಿದೆ. ಕಳೆದ 6 ವರ್ಷಗಳಿಂದ ಬೆಳೆ ಕೈಗೆ ಸಿಗಲಿಲ್ಲ. ಈ ಬಾರಿ ಉತ್ತಮ ಫಲ ಸಿಗುವುದೆಂಬ ಭರವಸೆ ಇದೆ. ದೇವೇಂದ್ರಪ್ಪ, ಮಾವು ಬೆಳೆದ ರೈತ, ಸಂತೇಬೆನ್ನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net