

ಮಂಗಳೂರು: ಸಂಸ್ಕಾರವಿಲ್ಲದ ಬದುಕು ಗಾಳಿಗೊಡ್ಡಿದ ದೀಪಕ್ಕೆ ಸಮ. ಆದರೆ, ಎಳವೆಯಿಂದಲೇ ರೂಢಿಸಿಕೊಂಡ ಉತ್ತಮ ಸಂಸ್ಕಾರ ಬದುಕಿಗೆ ದಾರಿದೀಪದಂತೆ ಇರುತ್ತದೆ. ಹಾಗಾಗಿ ಶಿಕ್ಷಣ ಮತ್ತು ಸಂಸ್ಕಾರವನ್ನು ಬದುಕಿನಲ್ಲಿ ರೂಢಿಸಿಕೊಳ್ಳುವುದು ಅತ್ಯಗತ್ಯ ಎಂದು ಉದ್ಯಮಿ ಸುಧಾಕರ ಆಚಾರ್ಯ ಅಭಿಪ್ರಾಯಪಟ್ಟರು.
ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು, ವೇದಭಾರತಿ ಸಂಪ್ರತಿಷ್ಠಾನದ ಸಹಯೋಗದೊಂದಿಗೆ ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ಆಚಾರ್ಯಾಚರಣಾ ಅಭ್ಯಾಸ ವರ್ಗದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ವಿಶ್ವಕರ್ಮ ಕಲಾ ಪರಿಷತ್ ಮೈಸೂರಿನ ಸಾಮವೇದಿ ಪಂಚಶಿಲ್ಪ ಪ್ರವೀಣ ಶ್ರೀಕಾಂತ ಆಚಾರ್ಯ ಹಾಗೂ ಬೇಲೂರಿನ ವೇದ ಹಾಗೂ ಸಂಸ್ಕೃತ ಶಿಕ್ಷಕ ವೇಲಾಪುರಿ ವಿಶ್ವನಾಥ ಶರ್ಮ ಅವರ ಮಾರ್ಗದರ್ಶನದಲ್ಲಿ ಈ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಮುಂಜಾನೆ ವೈದಿಕಾಗ್ನಿಹೋತ್ರದೊಂದಿಗೆ ಆರಂಭವಾದ ಅಭ್ಯಾಸವರ್ಗವನ್ನು ಕ್ಷೇತ್ರದ ಆಡಳಿತಾಧಿಕಾರಿ ಕೆ.ಉಮೇಶ ಆಚಾರ್ಯ ಉದ್ಘಾಟಿಸಿದರು. ಕಲಾ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಪಿ.ಗುರುದಾಸ್ ಸ್ವಾಗತಿಸಿದರು. ಕಲಾ ಪರಿಷತ್ತಿನ ಯುವ ವೃಂದ ವತಿಯಿಂದ ಭಜನಾ ಸಂಕೀರ್ತನೆ ನೆರವೇರಿಸಿತು. ಉತ್ಥಾನ, ಶೌಚ, ಸ್ನಾನ, ಸಂಧ್ಯಾವಂದನ, ಶಿಲ್ಪಕಾರ್ಯಾರಂಭ, ಭೋಜನ ವಿಧಿ, ತುಳಸೀವಂದನ, ರಂಗೋಲಿಯ ಕ್ರಮ ಇತ್ಯಾದಿ ದೈನಂದಿನ ವಿಧಿವಿಧಾನಗಳ ಮಾರ್ಗದರ್ಶನ ನೀಡಲಾಯಿತು.
ಕಲಾ ಪರಿಷತ್ ಅಧ್ಯಕ್ಷ ಡಾ.ಎಸ್‌ಪಿ ಗುರುದಾಸ್, ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಪಿ. ಎನ್.ಆಚಾರ್ಯ ಶುಭಾಶಂಸನೆ ಮಾಡಿದರು. ಕಡೇಶ್ವಾಲ್ಯ ನಾಗರಾಜ ಆಚಾರ್ಯ ಅತಿಥಿಗಳಾಗಿದ್ದರು. ಗೌರವ ಸಲಹೆಗಾರ ಪ್ರೊ.ಜಿ. ಯಶವಂತ ಆಚಾರ್ಯ ಸಮಾರೋಪ ನುಡಿಗಳನ್ನಾಡಿದರು. ಉಪಾಧ್ಯಕ್ಷೆ ರತ್ನಾವತಿ ಜೆ.ಬೈಕಾಡಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸಾಮವೇದಿ ಶ್ರೀಕಾಂತ ಆಚಾರ್ಯ ಹಾಗೂ ವಿಶ್ವನಾಥ ಶರ್ಮ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಕಲಾ ಪರಿಷತ್ತಿನ ಖಜಾಂಚಿ ಎ.ಜಿ.ಸದಾಶಿವ ವಂದಿಸಿದರು. ಉದಯಭಾಸ್ಕರ ಸುಳ್ಯ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಸಲಹೆಗಾರ ಸುಂದರ ಆಚಾರ್ಯ ಬೆಳುವಾಯಿ, ಪ್ರಧಾನ ಕಾರ್ಯದರ್ಶಿ ರಮ್ಯಾ ಲಕ್ಷ್ಮೀಶ, ಕಾರ್ಯದರ್ಶಿಗಳಾದ ವೈ.ಎನ್.ತಾರಾನಾಥ ಆಚಾರ್ಯ, ಸುಧಾಮ ಎಂ, ಸಹಖಜಾಂಚಿ ನಾಗರಾಜ ಕೆ.ಎಸ್, ಸದಸ್ಯರಾದ ಸುಧಾಕರ ಆಚಾರ್ಯ, ಶ್ರೀಪತಿ ಆಚಾರ್ಯ, ಪ್ರಶಾಂತ ತೊಕ್ಕೊಟ್ಟು, ಶ್ರೀವಿದ್ಯಾ ಪ್ರಶಾಂತ್ ಮೊದಲಾದವರು ಸಹಕರಿಸಿದರು.