ಪ್ರಧಾನಿಗೆ ಹಸ್ತಲಾಘವ ಮಾಡುವ ಅದೃಷ್ಟ

mysore
Published on

ಮೈಸೂರು: ನರೇಂದ್ರ ಮೋದಿ ಅವರು ನಡೆಸಿಕೊಟ್ಟ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು, ಪ್ರಧಾನಿಯ ಸ್ಫೂರ್ತಿದಾಯಕ ಮಾತುಗಳಿಂದ ಪ್ರೇರಣೆಗೊಂಡಿದ್ದಾರೆ.


ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ 7ನೇ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಚ್.ಡಿ.ಕೋಟೆ ತಾಲೂಕಿನ ಸಿ.ಹರ್ಷಿಕಾ ಮತ್ತು ರಾಷ್ಟ್ರ ಮಟ್ಟದ ಕಲೋತ್ಸವದಲ್ಲಿ ವಿಜೇತರಾದ ತಿ.ನರಸೀಪುರ ತಾಲೂಕಿನ ಮುಸುವಿನಕೊಪ್ಪಲು ಗ್ರಾಮದ ರಕ್ಷಿತಾ ಅದೃಷ್ಟಶಾಲಿ ವಿದ್ಯಾರ್ಥಿಗಳಾಗಿದ್ದಾರೆ. ಶಿಕ್ಷಕಿ ಅನುಪಮಾ ಈಕೆಯ ಮಾರ್ಗದರ್ಶಕರಾಗಿದ್ದರು.


ಈ ಕಾರ್ಯಕ್ರಮಕ್ಕೆ ರಾಜ್ಯದಿಂದ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಮೈಸೂರು ಜಿಲ್ಲೆಯ ಈ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸರ್ಕಾರಿ ಬಾಲಕರ ಪ್ರೌಢಶಾಲೆಯ ಯೋಗೇಂದ್ರ ಪ್ರಸಾದ್ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದ ಗಾರ್ಗಿದೇವಿ ಇನ್ನಿಬ್ಬರು ವಿದ್ಯಾರ್ಥಿಗಳಾಗಿದ್ದಾರೆ.

ಪರೀಕ್ಷಾ ಪೇ ಚರ್ಚಾದಲ್ಲಿ ಜಿಲ್ಲೆಯ ವಿದ್ಯಾರ್ಥಿನಿಯರು ಭಾಗಿ


ದೇಶದ ನಾನಾ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳ ಸಮೂಹದ ಮಧ್ಯೆ ಪ್ರಧಾನಿಗೆ ಹಸ್ತಲಾಘವ ಮಾಡುವ ಅವಕಾಶವೂ ಹರ್ಷಿಕಾಳಿಗೆ ದೊರೆತಿದ್ದು ವಿಶೇಷವಾಗಿದೆ.


ಎಚ್.ಡಿ.ಕೋಟೆ ತಾಲೂಕಿನ ಸೆಂಟ್ ಮೇರಿಸ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹರ್ಷಿಕಾ, ತನ್ನ ತಂದೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉಪಪ್ರಾಂಶುಪಾಲ ಎಸ್.ಚಂದ್ರಶೇಖರ್ ಜತೆ ಕಾರ್ಯಕ್ರಮಕ್ಕೆ ತೆರಳಿದ್ದಳು. ಹರ್ಷಿಕಾ ತಾಯಿ ವೈ.ಕೆ.ನಳಿನಾ ಎಚ್.ಡಿ.ಕೋಟೆ ತಾಲೂಕಿನ ನೂರಲಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಸಂತಸ ದುಪ್ಪಟ್ಟು: ಈ ನಡುವೆ, ಪ್ರಧಾನಿ ಮಾತುಗಳಿಂದ ವಿದ್ಯಾರ್ಥಿನಿ ಹರ್ಷಿಕಾಗೆ ಹೊಸ ಚೈತನ್ಯ ದೊರೆತಿದೆ. ಪರೀಕ್ಷಾ ಒತ್ತಡವನ್ನು ಹೇಗೆ ನಿರ್ವಹಣೆ ಮಾಡಬೇಕು? ಒತ್ತಡರಹಿತವಾಗಿ ಪರೀಕ್ಷೆಯನ್ನು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು? ಮೊಬೈಲ್‌ನಿಂದ ಹೇಗೆ ದೂರ ಇರಬೇಕು? ಮೊಬೈಲ್ ಅನ್ನು ಸಕಾರಾತ್ಮಕ ಚಟುವಟಿಕೆಗಳಿಗೆ ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ಪ್ರಧಾನಿ ಸಲಹೆ ಮಾಡಿದರು ಎಂದು ಹರ್ಷಿಕಾ ‘ವಿಜಯವಾಣಿ’ಗೆ ತಿಳಿಸಿದರು.


ಶಿಕ್ಷಣದೊಂದಿಗೆ ಆರೋಗ್ಯ ಮಹತ್ವ ತಿಳಿಸಿಕೊಟ್ಟರು. ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಅಭ್ಯಾಸದ ಕಡೆಗೆ ಗಮನ ನೀಡಬೇಕೆಂದು ಮಾರ್ಗದರ್ಶನ ಮಾಡಿದರು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಸಾಕ್ಷಿಯಾದ ರೈತನ ಪುತ್ರಿ


ತಿ.ನರಸೀಪುರ ತಾಲೂಕಿನ ಮುಸುವಿನಕೊಪ್ಪಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರಕ್ಷಿತಾ ಸಹ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅದೃಷ್ಟಶಾಲಿಯಾಗಿದ್ದಾಳೆ.


ವಿದ್ಯಾರ್ಥಿನಿ ರಕ್ಷಿತಾ ಅವರ ತಂದೆ ಕೆ.ವಿ.ಶೇಖರ್ ಕೃಷಿಕರು. ಇವರ ತಾಯಿ ಲಕ್ಷ್ಮೀ ಗೃಹಿಣಿ. ಇವರೊಂದಿಗೆ ಅದೇ ಶಾಲೆಯ ಕನ್ನಡ ಶಿಕ್ಷಕಿ ಅನುಪಮಾ ಸಹ ಭಾಗಿಯಾಗಿದ್ದರು.


ಪ್ರಧಾನಿಯೊಂದಿಗೆ ಮಾತನಾಡುವ ಅವಕಾಶ ರಕ್ಷಿತಾಗೆ ಸಿಗಲಿಲ್ಲ. ಆದರೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶ ಒದಗಿತು. ‘ಕಾರ್ಯಕ್ರಮ ಅದ್ಭುತವಾಗಿತ್ತು. ಪರೀಕ್ಷೆ ತಯಾರಿ ಕುರಿತು ಪ್ರಧಾನಿಯವರು ಉತ್ತಮ ಸಲಹೆ ನೀಡಿದ್ದಾರೆ. ಅದನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳುತ್ತೇನೆ’ ಎಂದು ರಕ್ಷಿತಾ ಹೇಳಿದಳು.


‘ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯಾಗಿ ಪಾಲ್ಗೊಂಡಿದ್ದ ನನಗೂ ಹೊಸ ಅನುಭವ ನೀಡಿತು. ಬಹಳ ಸಂತೋಷವೂ ಆಗಿದೆ. ಪರೀಕ್ಷಾ ಒತ್ತಡ ನಿರ್ವಹಣೆ, ಪರೀಕ್ಷಾ ಸಿದ್ಧತೆ, ಬರವಣಿಗೆಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಪ್ರಧಾನಿ ಮಕ್ಕಳಿಗೆ ಉತ್ತಮವಾಗಿ ಮಾರ್ಗದರ್ಶನ ಮಾಡಿದರು’ ಎಂದು ಶಿಕ್ಷಕಿ ಅನುಪಮಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net