

ಸಂಡೂರು: ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಂಡು ನಡೆದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಎಸ್‌ಆರ್‌ಎಸ್ ಶಾಲೆಯ ಪ್ರಾಚಾರ್ಯ ಅವಿನಾಶ್ ಕುಮಾರ್ ತ್ಯಾಗಿ ಹೇಳಿದರು.
ಪಟ್ಟಣದ ಎಸ್‌ಇಎಸ್ ವಿದ್ಯಾಮಂದಿರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮ ಹಾಗೂ ಯೋಗ ಶಿಬಿರದ ಸಮಾರೋಪದಲ್ಲಿ ಶನಿವಾರ ಮಾತನಾಡಿದರು.
ಎನ್‌ಡಿಎ, ಐಎಎಸ್, ಐಪಿಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಆರೋಗ್ಯಯುತ ಸಮಾಜಕ್ಕೆ ಉತ್ತಮ ನಾಯಕರ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಶ್ರದ್ಧೆ ಅತ್ಯಂತ ಮುಖ್ಯವಾಗಿದ್ದು, ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಗ ತರಬೇತುದಾರ ಶ್ರೀನಿವಾಸ ತುಮಟಿ ಮಾತನಾಡಿ, ಆರೋಗ್ಯಯುತ ಜೀವನಕ್ಕೆ ಯೋಗಾಭ್ಯಾಸ ಅವಶ್ಯಕ. ನಿತ್ಯ ಯೋಗ ಮಾಡಿ ನಿರೋಗಿಯಾಗಿ ಎಂದು ಸಲಹೆ ನೀಡಿದರು. ಪ್ರಾಚಾರ್ಯ ಬಿ.ಶ್ರೀನಿವಾಸ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು. ವಾಣಿಜ್ಯ ವಿದ್ಯಾರ್ಥಿ ಅನುಷಾ, ಹರ್ಷಿತಾ ಜೈನ್, ಎಸ್.ಅನುಷಾ. ಚಿನ್ಮಯಿ.ವಿ ನಿರ್ವಹಿಸಿದರು.