ಕೈಗಾರಿಕೆಗೆ ಲವತ್ತಾದ ಭೂಮಿ ಸ್ವಾಧೀನ ಸಲ್ಲ

ಶಿಡ್ಲಘಟ್ಟ ತಾಲೂಕು ಜಂಗಮಕೋಟೆಯ ಆಸುಪಾಸಿನಲ್ಲಿ ಕೆಐಡಿಎಬಿ ಸ್ವಾಧೀನಕ್ಕೆ ಉದ್ದೇಶಿಸಿರುವ ಜಮೀನುಗಳಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಭೇಟಿ ನೀಡಿ ಸಾಧಕ- ಬಾಧಕಗಳ ಬಗ್ಗೆ ರೈತರೊಂದಿಗೆ ಚರ್ಚಿಸಿದರು.
20.07.2024 SDLP 02
ಶಿಡ್ಲಘಟ್ಟ ತಾಲೂಕು ಜಂಗಮಕೋಟೆಯ ಆಸುಪಾಸಿನಲ್ಲಿ ಕೆಐಡಿಎಬಿ ಸ್ವಾಧೀನಕ್ಕೆ ಉದ್ದೇಶಿಸಿರುವ ಜಮೀನುಗಳಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಭೇಟಿ ನೀಡಿ ಸಾಧಕ- ಬಾಧಕಗಳ ಬಗ್ಗೆ ರೈತರೊಂದಿಗೆ ಚರ್ಚಿಸಿದರು.
Published on

ಸಂಸದ ಡಾ. ಕೆ.ಸುಧಾಕರ್ ಹೇಳಿಕೆ- ಜಂಗಮಕೋಟೆ ಬಳಿ ವಶಪಡಿಸಿಕೊಳ್ಳಲು ಉದ್ದೇಶಿತ ಪ್ರದೇಶಕ್ಕೆ ಭೇಟಿ


ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ತಾಲೂಕಿನ ಜಂಗಮಕೋಟೆ ಆಸುಪಾಸಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಜಮೀನು ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದ್ದು, ಉದ್ದೇಶಿತ ಸ್ಥಳಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಶನಿವಾರ ಭೇಟಿ ನೀಡಿ ರೈತರೊಂದಿಗೆ ಸಾಧಕ - ಬಾಧಕಗಳ ಬಗ್ಗೆ ಚರ್ಚಿಸಿದರು.
ಜಂಗಮಕೋಟೆ ಹೋಬಳಿ ಕೇಂದ್ರದ ಸುತ್ತಲ 13 ಗ್ರಾಮಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಗೋಮಾಳ, ಕೃಷಿ ಭೂಮಿ ಸೇರಿ ಒಟ್ಟು 1823 ಎಕರೆ ಜಮೀನನ್ನು ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿದೆ.
ಹೋಬಳಿಯ ಯಣ್ಣಂಗೂರು, ನಡಿಪಿನಾಯಕನಹಳ್ಳಿಯಲ್ಲಿ ಉದ್ದೇಶಿತ ಭೂಸ್ವಾಧೀನ ಪ್ರದೇಶಕ್ಕೆ ಭೇಟಿ ಕೊಟ್ಟು ಅಲ್ಲಿನ ರೈತರನ್ನು ಉದ್ದೇಶಿಸಿ ಮಾತನಾಡಿ, ಸಂಸದನಾಗಿ ಇಲ್ಲಿಗೆ ಬಂದಿಲ್ಲ. ನಿಮ್ಮ ಸೋದರನಾಗಿ ಕಷ್ಟಕ್ಕೆ ಹೆಗಲು ಕೊಡಲು ಬಂದಿದ್ದೇನೆ. ಕೈಗಾರಿಕಾ ಉದ್ದೇಶಕ್ಕೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ತಕರಾರು ಇಲ್ಲ. ಸರ್ಕಾರಿ ಭೂಮಿ, ಗೋಮಾಳ, ಖರಾಬು ಜಮೀನು ಬಿಟ್ಟು ಫಲವತ್ತಾದ ಕೃಷಿ ಜಮೀನು ಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ವಿರೋಧವಿದೆ. ಅದಕ್ಕಾಗಿ ಇಲ್ಲಿಗೆ ನಿಮ್ಮೊಂದಿಗೆ ಬಂದಿದ್ದೇನೆ ಎಂದು ಹೇಳಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಕೈಗಾರಿಕೆಗಳ ಸ್ಥಾಪನೆಗಾಗಿ ಫಲವತ್ತಾದ ಕೃಷಿ ಭೂಮಿಗಳನ್ನು ಸ್ವಾಧೀನಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ರೈತರಿಗೆ ಆಗಬಹುದಾದ ಅನಾಹುತ, ಸ್ಥಿತಿಗತಿಗಳ ಬಗ್ಗೆ ವಿವರಿಸಿದರು.
ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಸ್ಕೂಲ್ ದೇವರಾಜ್, ದಿಬ್ಬೂರಹಳ್ಳಿ ಡಿಎಸ್‌ಎನ್ ರಾಜಣ್ಣ, ನಡಿಪಿನಾಯಕನಹಳ್ಳಿ ಅಜಿತ್, ಬಳುವನಹಳ್ಳಿ ರಾಜು, ಶ್ರೀಧರ್, ಮಳ್ಳೂರಯ್ಯ, ಅರಿಕೆರೆ ಮುನಿರಾಜು, ಗ್ಯಾಸ್ ನಾರಾಯಣಸ್ವಾಮಿ ಹಾಗೂ ಇತರರು ಹಾಜರಿದ್ದರು.


ಗೊಂದಲ ನಿವಾರಣೆ ನಂತರವೇ ಹೋರಾಟದ ರೂಪುರೇಷೆ
ಈಗಲೂ ರೈತರಲ್ಲಿ ಕೆಲವರಿಗೆ ಕೈಗಾರಿಕೆ ಸ್ಥಾಪನೆ ಆಗಲಿ ಎನ್ನುವ ಭಾವನೆ ಇದೆ. ಮತ್ತೆ ಕೆಲವರಿಗೆ ಬೇಡ ಎನ್ನುವ ಅಭಿಪ್ರಾಯವಿದೆ. ನಿಮ್ಮಲ್ಲಿನ ಗೊಂದಲ ನಿವಾರಿಸಿದ ನಂತರವೇ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇಲ್ಲಿ ಕೈಗಾರಿಕೆಗಳು ಬೇಡ, ಜಮೀನು ಬೇಕು ಎನ್ನುವುದಾದರೆ ಮಾತ್ರವೇ ಈ ಹೋರಾಟವನ್ನು ನಿಮ್ಮೊಂದಿಗೆ ಇದ್ದು ಆರಂಭಿಸುತ್ತೇನೆ, ಬೇಡ ಎನ್ನುವುದಾದರೆ ಬಿಡೋಣ, ಇಲ್ಲಿ ಕೈಗಾರಿಕೆಗಳು ಆಗಲಿ ಎಂದು ಡಾ.ಕೆ. ಸುಧಾಕರ್ ತಿಳಿಸಿದರು. ಅಧಿಸೂಚನೆ ಹೊರಡಿಸಿದ ವ್ಯಾಪ್ತಿಯ ಎಲ್ಲ ಜಮೀನುಗಳ ಮಾಲೀಕರನ್ನು ಗ್ರಾಮವಾರು ಭೇಟಿ ಮಾಡಿ ಕೈಗಾರಿಕೆ ಸ್ಥಾಪನೆಗಾಗಿ ಜಮೀನು ಸ್ವಾಧೀನದ ಪರ ಹಾಗೂ ವಿರೋಧ ಎಷ್ಟು ಮಂದಿ ಇದ್ದಾರೆ ಎಂದು ಪಟ್ಟಿ ಮಾಡಿ ಕೈಗಾರಿಕೆ ಸ್ಥಾಪನೆಗೆ ವಿರೋಧಿಸುವವರ ಸಂಖ್ಯೆ ಹೆಚ್ಚಿದ್ದರೆ ಮಾತ್ರ ಹೋರಾಟ ಆರಂಭಿಸೋಣ ಎಂದು ತಿಳಿಸಿದ ಸಂಸದರು ಪರ - ವಿರೋಧದ ಪಟ್ಟಿ ಮಾಡುವಂತೆ ಸ್ಥಳೀಯ ನಾಯಕರಿಗೆ ಸೂಚಿಸಿದರು.


ಜಮೀನು ಬಿಟ್ಟರೆ ಬದುಕು ಸರ್ವನಾಶ
ಯಣ್ಣಂಗೂರು, ನಡಿಪಿನಾಯಕನಹಳ್ಳಿಯ ಕೆಲ ರೈತರು ನಮಗೆ ಇರುವುದು ಅರ್ಧ ಎಕರೆ, ಒಂದು, ಒಂದೂವರೆ ಎಕರೆ ಅಷ್ಟೆ. ಸರ್ಕಾರ ಒಂದಷ್ಟು ದುಡ್ಡು ಕೊಡುತ್ತದೆ ನಿಜ. ಆ ದುಡ್ಡನ್ನು ಖರ್ಚು ಮಾಡಿ ಬಿಡುತ್ತೇವೆ, ಮುಂದೆ ನಮ್ಮ ಬದುಕು ಹೇಗೆ ಎಂದು ಪ್ರಶ್ನಿಸಿದರು. ಜಮೀನು ಬಿಟ್ಟುಕೊಟ್ಟರೆ ನಮ್ಮ ಬದುಕು ಸರ್ವನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ರಾಜ್ಯ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ
ಫಲವತ್ತಾದ ಭೂಮಿ ಯಾವುದು, ಖರಾಬು, ಗೋಮಾಳ ಯಾವುದು ಎಂದು ಸರ್ಕಾರಕ್ಕೆ ತಿಳಿದಿಲ್ಲವೇ?. ರಾಜ್ಯ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ. ಕೇವಲ ಬಾಯಿಮಾತಿಗೆ ಮಾತ್ರವೇ ಅನ್ನದಾತರ ಪರ ಇದ್ದೇವೆ ಎನ್ನುತ್ತಾರೆ. ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ಪುಡಿಗಾಸು ಪರಿಹಾರ ಕೊಟ್ಟು ಅವರನ್ನು ಬೀದಿಗೆ ತಳ್ಳುವ ನೀಚ ಕೆಲಸಕ್ಕೆ ಮುಂದಾಗಬೇಡಿ ಎಂದು ಡಾ. ಕೆ. ಸುಧಾಕರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು. ಎಷ್ಟೇ ಕಷ್ಟವಾದರೂ ಸರಿ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net