

ಪಡುಬಿದ್ರಿ: ಪೂರ್ಣಪ್ರಜ್ಞದ ಮಕ್ಕಳು ಪೂರ್ಣತೆ ಹೊಂದುವವರಾಗಬೇಕು. ಸಂಸ್ಕಾರ ಸಂಸ್ಕೃತಿಯ ಜೊತೆಯಲ್ಲಿ ಉತ್ತಮ ಜ್ಞಾನವನ್ನು ಪಡೆದು ರಾಷ್ಟ್ರದ ಸತ್ಪ್ರಜೆಗಳಾಗಬೇಕು. ಗುರು ಹಿರಿಯರಿಗೆ ಗೌರವ ಕೊಟ್ಟು ಅವರ ಜ್ಞಾನವನ್ನು ಪಡೆದುಕೊಂಡು ನೀವು ಸಮಾಜಕ್ಕೆ ಕೊಡುಗೆ ಕೊಡುವಂತವರಾಗಿ ಮೂಡಿಬರಬೇಕು ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಕಾಲೇಜಿಗೆ ಹೊಸದಾಗಿ ಪ್ರಥಮ ಪಿಯುಸಿಗೆ ಸೇರ್ಪಡೆಗೊಂಡ ಮಕ್ಕಳಿಗೆ ಶುಭ ಹಾರೈಸಿದರು. ವಿಜ್ಞಾನ ವಿಭಾಗದ ಸಂಯೋಜಕ ಉತ್ತೇಶ್ ಹಾಗೂ ವಾಣಿಜ್ಯ ವಿಭಾಗದ ಸಂಯೋಜಕಿ ಜಯಶ್ರೀ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯ ಕ್ರಮ ನೆರವೇರಿಸಿ ವಂದಿಸಿದರು.