ಮಿತ ಆಹಾರ, ವ್ಯಾಯಾಮದಿಂದ ಉತ್ತಮ ಆರೋಗ್ಯ

25hgr1
Published on

ಹಲಗೂರು : ಪ್ರತಿಯೊಬ್ಬರೂ ಆಹಾರವನ್ನು ಮಿತಿಯಾಗಿ ತೆಗೆದುಕೊಳ್ಳಬೇಕು ಹಾಗೂ ನಿತ್ಯ 30 ರಿಂದ 45 ನಿಮಿಷ ವ್ಯಾಯಾಮ ಮಾಡುವುದರಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದು ಮೈಸೂರು ನಾರಾಯಣ ಹೃದಯಾಲಯದ ವೈದ್ಯಾಧಿಕಾರಿ ಡಾ.ಗುಲ್ಜರ್ ತಿಳಿಸಿದರು.

ಲಯನ್ಸ್ ಕ್ಲಬ್ ಹಾಗೂ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯಿಂದ ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹೃದಯ ತಪಾಸಣೆ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷೃ ವಹಿಸಬಾರದು. ನನಗೆ ಸ್ವಲ್ಪ ಎದೆ ಉರಿ ಬರುತ್ತದೆ ಮತ್ತು ನೋವು ಇದೆ, ಇದು ಗ್ಯಾಸ್ ಟ್ರಬಲ್ ಎಂದು ಸುಮ್ಮನಿರುವುದು ಸೂಕ್ತವಲ್ಲ. ಸಮಯಕ್ಕೆ ಸರಿಯಾಗಿ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಮಾತ್ರ ಮುಂದಿನ ಜೀವನ ಸುಖಕರವಾಗಿರುತ್ತದೆ, ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು. ಮಧುಮೇಹ ಇರುವವರು ಯಾವಾಗಲೂ ಮಿತಿಯಾದ ಆಹಾರ ಸೇವನೆ ಮಾಡಬೇಕು. ಶುಗರ್ ಒಂದು ಸೈಲೆಂಟ್ ಕಿಲ್ಲರ್ ಇದ್ದ ಹಾಗೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸಾಮಾನ್ಯವಾಗಿ ಈಗ ಎಲ್ಲರಿಗೂ ಬಿಪಿ, ಶುಗರ್ ಕಾಣಿಸಿಕೊಳ್ಳುತ್ತದೆ. ಆದುದರಿಂದ ನಾವು ಎಚ್ಚರಿಕೆಯಿಂದ ಇರುವುದು ಸೂಕ್ತ ಎಂದು ಸಲಹೆ ನೀಡಿದರು.

ಇಂದು ನಡೆದ ತಪಾಸಣಾದಲ್ಲಿ ಮೂರು ಜನರಿಗೆ ಆ್ಯಂಜಿಯೋಗ್ರಾಮ್ ಅವಶ್ಯಕತೆ ಇದ್ದು, ಅದರ ಜತೆಯಲ್ಲಿ ಇನ್ನು ಏಳು ಜನರನ್ನು ಸಹ ಮೈಸೂರಿನ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಎಂದರು.

ನಾರಾಯಣ ಹೃದಯಾಲಯದ ಇನ್ಶೂರೆನ್ಸ್ ಅಡ್ವೈಸರ್ ಅನೀಶ್ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಕ್ಲಬ್‌ನ ಪ್ರಶಾಂತ್, ರೂಪಾ, ರಮ್ಯಾ, ಪ್ರೇಮಕುಮಾರಿ, ಅನಿಲ್ ಅವರನ್ನು ಅಭಿನಂದಿಸಲಾಯಿತು.

ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಎನ್.ಕೆ.ಕುಮಾರ್, ಕಾರ್ಯದರ್ಶಿ ಡಿ.ಎಲ್.ಮಾದೇಗೌಡ, ಖಜಾಂಚಿ ಕೆ.ಶಿವರಾಜು, ಡಾ. ಶಂಶುದ್ದೀನ್, ಎಚ್.ವಿ.ರಾಜು, ರಾಜೇಂದ್ರ, ಎಚ್.ಆರ್.ಪದ್ಮನಾಭ, ಎ.ಟಿ.ಶ್ರೀನಿವಾಸ್, ಗುಣೇಶ್, ಗುರುಸಿದ್ಧ, ಪ್ರವೀಣ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net