

ಆಲೂರು: ನಿಸರ್ಗದತ್ತವಾದ ಆಹಾರ ಸೇವಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಜತೆಗೆ ಅನಾರೋಗ್ಯದ ಅಪಾಯಗಳು ಕಡಿಮೆ ಮಾಡಿಕೊಳ್ಳಬಹುದು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆರೋಗ್ಯ ಇಲಾಖೆ ಆಲೂರು, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಲೂರು ಹಾಗೂ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಹೃದಯಕ್ಕಾಗಿ ಹೆಜ್ಜೆ ಹಾಕೋಣ ಘೋಷವಾಕ್ಯದಡಿ ಆಯೋಜಿಸಿದ್ದ ವಾಕಥಾನ್‌ಗೆ ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲಿಯೂ ಯುವಜನರು ಹೃದಯಾಘಾತಕ್ಕೆ ಹೆಚ್ಚು ಒಳಗಾಗುತ್ತಿದ್ದಾರೆ. ವೈದ್ಯರು ಹೇಳುವಂತೆ ನೀವು ಆರು ಜೀವನಶೈಲಿಯ ಆಯ್ಕೆಗಳನ್ನು ಮೊದಲು ತ್ಯಜಿಸಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು. ಅಲ್ಲದೆ ಕೆಲವು ಆಹಾರಗಳು ಹೃದಯ ಸ್ನೇಹಿಯಾಗಿದ್ದು, ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮಾ ಮಾತನಾಡಿ, ಹೃದಯ ರೋಗಗಳು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಲ್ಲದೆ ಕೆಲವೊಮ್ಮೆ ಯಾವುದೇ ಎಚ್ಚರಿಕೆಯ ಚಿಹ್ನೆಗಳನ್ನು ನೀಡದೆಯೇ ಹೃದಯದ ಪರಿಸ್ಥಿತಿಗಳು ಬಹಳ ನಿರ್ಣಾಯಕವಾಗಿರುವುದು ಸಾಬೀತಾಗಿದೆ. ಅದಕ್ಕಾಗಿಯೇ ನಿಮ್ಮ ಹೃದಯವನ್ನು ನಿಯಮಿತವಾಗಿ ಪರೀಕ್ಷಿಸುವುದು ಬಹಳ ಮುಖ್ಯವಾಗಿದೆ. ಆರೋಗ್ಯಕರ ಹೃದಯವು ಒಟ್ಟಾರೆ ಉತ್ತಮ ಆರೋಗ್ಯಕ್ಕೆ ಕೇಂದ್ರವಾಗಿದೆ. ಜತೆಗೆ ಹೃದಯ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ಹೃದ್ರೋಗಗಳನ್ನು ತಡೆಗಟ್ಟಬಹುದಾಗಿದೆ. ಬಾಹ್ಯ ಅಂಶಗಳ ಹಾರೈಕೆಯು ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ಕೊಡುಗೆ ನೀಡುತ್ತದೆ ಎಂದರು.
ನಮ್ಮ ಕಳಪೆ ಆಹಾರದ ಆಯ್ಕೆಗಳು, ದೈಹಿಕ ನಿಷ್ಕ್ರಿಯತೆ, ಮದ್ಯಪಾನ ಮತ್ತು ಧೂಮಪಾನದ ಸಂಯೋಜನೆ ಹೆಚ್ಚು ಅನಾರೋಗ್ಯವನ್ನು ಉಂಟು ಮಾಡುತ್ತವೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಲೂರು ಪಟ್ಟಣದ ಮುಖ್ಯ ರಸ್ತೆ ಮತ್ತು ಬಸ್ ನಿಲ್ದಾಣದಲ್ಲಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹಿರಾಬೇಗಂ, ನಿರ್ದೇಶಕ ಸದಸ್ಯರಾದ ಸಂದೇಶ್, ಖಾಲಿ ಪಾಷಾ, ಬಿಇಒ ಕೃಷ್ಣೇಗೌಡ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮಲ್ಲೇಶ್, ತಾಪಂ ಇಒ ಸುಬ್ರಹ್ಮಣ್ಯ, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ, ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ಕಟ್ಟೆಗದ್ದೆ ನಾಗರಾಜ್, ವೈದ್ಯರಾದ ಡಾ.ಜಯರಾಜ್, ಗಿರೀಶ್ ಬಸಪ್ಪ, ಡಾ. ಕವಿತಾ ಗಿರೀಶ್, ಆರೋಗ್ಯ ಇಲಾಖೆ ಸತೀಶ್, ಮೋಹನ್ ಇತರರು ಇದ್ದರು.