ಸಿರಿ ಸಂಪತ್ತಿಗಿಂತ ಉತ್ತಮ ಆರೋಗ್ಯ ಮುಖ್ಯ

8bhr 2
Published on

ಬಾಳೆಹೊನ್ನೂರು: ಯಾವುದೇ ಸಿರಿ ಸಂಪತ್ತಿಗಿಂತ ಯುವಜನರಿಗೆ ಉತ್ತಮ ಆರೋಗ್ಯ ಮುಖ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಹೇಳಿದರು.

ರೇಣುಕ ನಗರದ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಜೇಸಿಐ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುವ ಜನಾಂಗ ತಮ್ಮ ಹಾಗೂ ತಮ್ಮ ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯುವಜನರು ಯಾವುದೇ ದುರಭ್ಯಾಸಗಳನ್ನು ಹೊಂದದೆ ಕ್ರೀಡೆ, ಓದಿನಲ್ಲಿ ತೊಡಗಿಸಿಕೊಂಡು ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದರು.

ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಐಟಿಐ ವಿದ್ಯಾರ್ಥಿಗಳ ಶಿಸ್ತು ಎಲ್ಲರಿಗೂ ಮಾದರಿ. ಶಿಸ್ತಿನ ಜೀವನದ ಜತೆಯಲ್ಲಿ ಆರೋಗ್ಯ ಕಾಪಾಡಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬಹುದು. ಮುಂದಿನ ದಿನಗಳಲ್ಲಿ ಜೇಸಿ ಸಂಸ್ಥೆ ವತಿಯಿಂದ ಐಟಿಐ ಕಾಲೇಜಿನಲ್ಲಿ ಬೃಹತ್ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.

ಹಿರಿಯ ಆರೋಗ್ಯ ನಿರೀಕ್ಷಕರಾದ ಭಗವಾನ್ ಮಾತನಾಡಿ, ಇಂದಿನ ದಿನಗಳಲ್ಲಿ ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಆರೋಗ್ಯ ಇಲಾಖೆಯಿಂದ ಅನೇಕ ಹಳ್ಳಿಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net