

ವಿಜಯವಾಣಿ ಸುದ್ದಿಜಾಲ ಧಾರವಾಡ
ಜ್ಞಾನಾರ್ಜನೆ ಆದರ್ಶ ವಿದ್ಯಾರ್ಥಿಗಳ ಸೊತ್ತು. ವಿದ್ಯಾರ್ಥಿಗಳು ಶರೀರ ಸೌಂದರ್ಯಕ್ಕಿಂತ ಹೃದಯ ಶ್ರೀಮಂತಿಕೆಗೆ ಆದ್ಯತೆ ನೀಡಬೇಕು. ಜೀವನದಲ್ಲಿ ರುಚಿ ಮುಖ್ಯವಲ್ಲ ಅಭಿರುಚಿ ಮುಖ್ಯ ಎಂದು ನಿವೃತ್ತ ಶಿಕ್ಷಕ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.
ಇಲ್ಲಿನ ಕಲ್ಯಾಣನಗರದ ಶ್ರೀ ಸಿದ್ದರಾಮೇಶ್ವರ ಕಲಾ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಸಾಧನೆಗೆ ಒಳ್ಳೆಯ ಆರೋಗ್ಯವು ಮುಖ್ಯ. ಇತರರಿಗಾಗಿ ಬದುಕುವುದು ಸಾರ್ಥಕ ಬದುಕು. ನಿನಗಾಗಿ ಬದುಕುವುದು ನಿರರ್ಥಕ. ಸಾಧಕರಾಗಲು ದೃಢಸಂಕಲ್ಪ, ಆತ್ಮವಿಶ್ವಾಸ ಮುಖ್ಯ. ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿರಾಶರಾಗದೆ ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಆರೋಗ್ಯಕರ ಸಮಾಜದ ನಿರ್ಮಾತೃಗಳಾಗಬೇಕು ಎಂದರು.
ಡಾ. ಗಿರಿಜಾ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ತಾಳ್ಮೆ, ಸಮಾಧಾನ ಗುಣ ಮುಖ್ಯ. ಹಾರ್ಡ್ ವರ್ಕ್ ಬದಲು, ಸ್ಮಾರ್ಟ್ ವರ್ಕ್ ಮುಖ್ಯ. ಪರಿಶ್ರಮದ ಜೀವನವು ಶಿಸ್ತು, ಸಮಯ ಪ್ರಜ್ಞೆ ಮೂಡಿಸುತ್ತದೆ ಎಂದರು.
ಅಧ್ಯತೆ ವಹಿಸಿದ್ದ ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಮಾತನಾಡಿ, ವಿದ್ಯಾರ್ಥಿ ಜೀವನ ಒಂದು ರೀತಿ ತಪಸ್ಸು ಇದ್ದಂತೆ. ವಿದ್ಯಾರ್ಥಿಗಳು ವೃತಾಧಾರಕರಾಗಿ ಅಧ್ಯಯನ ಮಾಡಬೇಕು. ಕೀಳು ವಿಚಾರ ತ್ಯಜಿಸಿ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಡಾ. ಶಂಕರ ಚಕ್ರವರ್ತಿ. ಆರ್. ಕೆ. ಗುರುವಿನ, ಸಿ.ಎಸ್. ಇಳಕಲ್, ಎಸ್.ಎಂ. ಕೊಟಬಾಗಿ, ಎ.ಎಚ್. ಜಯಶೀಲಾ ಬನ್ನೂರಮಠ, ಉಪನ್ಯಾಕರು, ಇದ್ದರು.
ಡಾ. ಕುಮಾರಸ್ವಾಮಿ ಹಿರೇಮಠ ಸ್ವಾಗತಿಸಿದರು. ಸಿದ್ದಲಿಂಗೇಶ್ವರ ದಿಂಡೂರ ನಿರೂಪಿಸಿದರು. ಮಧು ಪೂಜಾರ ವಂದಿಸಿದರು.