

ವಿಜಯಪುರ: ಉತ್ತಮ ಆಹಾರವೇ ಸದೃಢ ಆರೋಗ್ಯದ ಗುಟ್ಟು ಎಂದು ಕೃಷಿ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ಹೇಳಿದರು.
ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇನ್ನರ್‌ವ್ಹಿಲ್ ಕ್ಲಬ್ ಸದಸ್ಯರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಆಹಾರದಿಂದ ಆರೋಗ್ಯ: ಕೈತೋಟದಲ್ಲಿ ತರಕಾರಿ ಬೇಸಾಯದ ವಿಧಾನಗಳು’ ವಿಷಯದ ಕುರಿತ ಒಂದು ದಿನದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಷಮುಕ್ತ ತರಕಾರಿ ಬಳಕೆಯಿಂದ ತಮ್ಮ ಕುಟುಂಬದ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಮನೆಯಲ್ಲಿ ಕೈತೋಟ ನಿರ್ಮಾಣ ಮಾಡುವುದು ಅತ್ಯಂತ ಸರಳ ಮತ್ತು ಉತ್ತಮ ವಿಧಾನವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಿಧ ಹವಾಮಾನ ಮತ್ತು ಋತುಮಾನಗಳಿಗೆ ತಕ್ಕಂತೆ ಅನೇಕ ತರಕಾರಿಗಳು ಮನೆಯ ಹಿತ್ತಲದಲ್ಲಿ, ಮಾಳಿಗೆಯ ಮೇಲ್ಚಾವಣಿಯ ಮೇಲೆ ಹಾಗೂ ಗೋಡೆಗೆ ಅಂಟಿದ ವಿಧಾನದಲ್ಲಿ ಬೆಳೆದುಕೊಳ್ಳಬೇಕೆಂದು ಸದಸ್ಯರಿಗೆ ಹೇಳಿದರು.
ಕಲಬುರಗಿ ಕೃಷಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ರವೀಂದ್ರ ಪಾಟೀಲ ಮಾತನಾಡಿ, ಆರೋಗ್ಯದ ಪಂಚ ಸೂತ್ರಗಳಾದ ಆಹಾರ, ವಿಹಾರ, ವಿಚಾರ, ವ್ಯವಹಾರ ಹಾಗೂ ವ್ಯಾಯಾಮಗಳ ಮಹತ್ವವನ್ನು ತಿಳಿಸಿ, ದೈಹಿಕ ಆರೋಗ್ಯ ಮತ್ತು ಮಾನಸಿಕ ತೃಪ್ತಿಗಾಗಿ ಸ್ವಂತ ಬೆಳೆದ ತರಕಾರಿ ಬಳಸಲು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಎಂ. ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನಿ ಡಾ. ಶ್ವೇತಾ ಮನ್ನಿಕೇರಿ ಮಾಹಿತಿ ನೀಡಿದರು. ಶ್ವೇತಾ ಗುನ್ಹಾಳಕರ ಅಧ್ಯಕ್ಷತೆ ವಹಿಸಿದ್ದರು. ಉಜ್ವಲಾ ಪಾಟೀಲ, ಗೀತಾ ಪಾಟೀಲ ಉಪಸ್ಥಿತರಿದ್ದರು. ಡಾ. ಶಿಲ್ಪಾ ಚೊಗಟಾಪುರ ನಿರ್ವಹಿಸಿದರು. ಸುಮಾರು 100 ಮಹಿಳಾ ಸದಸ್ಯೆಯರಿದ್ದರು.