ಗುಣಮಟ್ಟದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

15 KRN-1
Published on

ಕೆ.ಆರ್.ನಗರ : ನಿತ್ಯ ಸೇವಿಸುವ ಆಹಾರ ಮತ್ತು ಸೋಮಾರಿತನದಿಂದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಪುರಸಭಾ ಕಾರ್ಯಾಲಯ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನಾಚರಣೆ ಮತ್ತು ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ಮಾತನಾಡಿದರು.


ಹಸಿವು ನೀಗಿಲೆಂಬ ಕಾರಣಕ್ಕಾಗಿ ಆಹಾರ ಸೇವಿಸುವ ಬದಲು ಉತ್ತಮ ಆರೋಗ್ಯ ಹೊಂದಲು ಆಹಾರ ಸೇವನೆ ಮಾಡಬೇಕು. ಆದ್ದರಿಂದ ಈ ವಿಚಾರದಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಿ ಗುಣಮಟ್ಟದ ಆಹಾರ ಸೇವನೆ ಮಾಡಬೇಕೆಂದು ಸಲಹೆ ನೀಡಿದರು.


ಹಸಿವಾದಾಗ ಮಾತ್ರ ಊಟ ಮಾಡಬೇಕೆ ಹೊರತು ಬಲವಂತಕ್ಕೆ ಮತ್ತು ಸಿಕ್ಕ ಸಮಯದಲ್ಲಿ ಆಹಾರ ಸೇವಿಸಬಾರದು. ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇದನ್ನು ಪ್ರತಿಯೊಬ್ಬರೂ ಅರಿತು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು ಎಂದ ಅವರು, ಆಹಾರ ಸೇವನೆಯ ವಿಚಾರದಲ್ಲಿ ಸ್ವಚ್ಛತೆ ಪ್ರಮುಖವಾಗಿದ್ದು, ಹೋಟೆಲ್ ಮತ್ತು ಶುಭ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು.
ಗ್ರಾಹಕರಿಗೆ ಗುಣಮಟ್ಟದ ಆಹಾರ ಒದಗಿಸುವುದರ ಜತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೋಟೆಲ್ ಮಾಲೀಕರಿಗೆ ಮಾರ್ಗದರ್ಶನ ಮಾಡಿದರು.


ಆಹಾರ ಸಂರಕ್ಷಾಣಾಧಿಕಾರಿ ಎಂ.ಸಂದೀಪ್ ಮಾತನಾಡಿ, ಗುಣಮಟ್ಟದ ಆಹಾರದ ಜತೆಗೆ ಕಡ್ಡಾಯವಾಗಿ ಶುದ್ಧ ನೀರನ್ನು ಸೇವಿಸಿ ಎಂದು ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಅದರ ಅನುಸರಣೆ ಕುರಿತು ಕಿರು ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪರಮೇಶ್, ತಾಲೂಕು ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಟಿಎಪಿಸಿಎಂಎಸ್ ಕಾರ್ಯದರ್ಶಿ ಕೆ.ಸಿ.ಧರ್ಮರಾಜು, ಪುರಸಭೆ ಆರೋಗ್ಯ ನಿರೀಕ್ಷಕ ಎಚ್.ಎಸ್.ಲೋಕೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಜೆ.ಮಹೇಶ್, ಹೋಟೇಲ್ ಮಾಲೀಕರಾದ ನಟರಾಜು, ನರಸಿಂಹ, ವೈ.ಪಿ.ಮಹದೇವ್, ಮಂಜುನಾಥ್ ನಾಯ್ಡು, ಕಲ್ಯಾಣ ಮಂಟಪ ವ್ಯವಸ್ಥಾಪಕರಾದ ಯು.ಕೃಷ್ಣಭಟ್, ಸದಾಶಿವಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net