

ನರಗುಂದ: ತಾಯಿ-ಶಿಶು ಮರಣ, ರಕ್ತಹೀನತೆ ಹೋಗಲಾಡಿಸುವುದು ಪೋಷಣ ಅಭಿಯಾನದ ಮುಖ್ಯಉದ್ದೇಶವಾಗಿದೆ. ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಪೋಷಣ ಅಭಿಯಾನದ ಕಾರ್ಯಕ್ರಮ ಸಂಯೋಜಕ ಮಂಜುನಾಥ ಗುಗ್ಗರಿ ಹೇಳಿದರು.
ಪಟ್ಟಣದ ಜಮಲಾಪೂರ ಬಡಾವಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪೋಷಣ ಮಾಸಾಚರಣೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಳ್ಳಲಾಗುವ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಗರ್ಭಿಣಿಗೆ ಸೀಮಂತ, ತಾಯಂದಿಯರಿಗೆ ಎದೆಹಾಲು ಉಣಿಸುವ ಬಗ್ಗೆ ಅರಿವು, ಮಕ್ಕಳ ವಿವಿಧ ಹಂತದ ಬೆಳವಣಿಗೆಯ ಬಗ್ಗೆ ಜಾಗೃತಿ, ಮಕ್ಕಳಿಗೆ ತಿನಿಸುವ ಆಹಾರ ಪ್ರಮಾಣ, ಬಳಕೆ ಹಾಗೂ ಪೌಷ್ಟಿಕಾಂಶದ ಆಹಾರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಉತ್ತಮ ಆರೋಗ್ಯ ನೀಡಿ, ಆರೋಗ್ಯಯುತ ಸಮಾಜ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು. ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ ಗಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅತಿಯಾದ ಬೇಕರಿ ಪದಾರ್ಥ, ಮಾದಕ ವಸ್ತುಗಳ ಸೇವನೆಯಿಂದಾಗಿ ನಮ್ಮ ಆರೋಗ್ಯ ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆರೋಗ್ಯಕರ ಬದುಕಿಗೆ ಸಮತೋಲನದ ಆಹಾರ ಸೇವನೆ ಮುಖ್ಯ ಎಂದರು.
ಜಾವೀದಾ ನಾಯ್ಕರ, ಅಮೀರವ್ವ ಖುದಾನವರ, ಗಂಗಮ್ಮ ಮುಳ್ಳೂರ, ಸುಪ್ರಿಯಾ ಬಾಂದಲಕರ, ಫಾತಿಮಾ ನಾಯ್ಕರ, ಮಕ್ತುಂಸಾಬ್ ಮುಲ್ಲಾ, ಸಲ್ಮಾ ಮುಲ್ಲಾಖಾನ್, ಅಂಗನವಾಡಿ ಕಾರ್ಯಕರ್ತೆಯರಾದ ಪಿ.ಎ. ಶಾನವಾಡ, ದೀಪಾ ಜಾಮದಾರ, ಎಸ್.ಎಸ್.ಪಾಟೀಲ, ಇತರರಿದ್ದರು.